ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ 5 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಇಂದಿನಿಂದ ಮತ್ತೆ ಪುನರಾರಂಭಗೊಂಡಿದೆ. ಕೊರೋನಾ ಹರಡುವ ಮುಂಜಾಗೃತೆಗಾಗಿ ಮಾರ್ಚ್ ನಿಂದ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು.

ಹವಾನಿಯಂತ್ರಿತ ಮೆಟ್ರೋದಲ್ಲಿ ಏಕಕಾಲದಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಸೋಂಕು ವ್ಯಾಪಕವಾಗಿ ಹರಡುವ ಭಯ ಎದುರಾಗಿತ್ತು. ಹೀಗಾಗಿ ಮೆಟ್ರೋ ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು.

ಇಂದು ಬೆಳಗ್ಗೆ 8 ಗಂಟೆಗೆ ಭೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಮೊದಲ ಟ್ರೈನ್ ಆರಂಭವಾಗಿದೆ. ಬೆಳಗ್ಗೆ 8 ರಿಂದ 11 ರವರೆಗೆ ಹಾಗೂ ಸಂಜೆ 4. 30 ರಿಂದ 7. 30 ರ ತನಕ 5 ನಿಮಿಷಗಳ ಅಂತರದಲ್ಲಿ ರೈಲುಗಳ ಕಾರ್ಯ ನಿರ್ವಹಿಸಲಿವೆ.

ಸೆ. 9 ಮತ್ತು 10 ರಂದು ಹಸಿರು ಮೆಟ್ರೋ ರೈಲುಗಳೂ ಸಂಚಾರ ಪ್ರಾರಂಭಿಸಲಿವೆ. ಸಕಲ ಮುಂಜಾಗ್ರತಾ ಕ್ರಮದೊಂದಿಗೆ ಪ್ರಯಾಣಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ತಾಪಮಾನ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಸ್ಯಾನಿಟೈಸರ್ ಬಳಕೆಗೆ ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ.