ಬೆಂಗಳೂರು : ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಬ್ಯಾಂಕಿನ ಅಧ್ಯಕ್ಷ ಹಾಗೂ ಪುತ್ರ ಸೇರಿದಂತೆ ಆರೋಪಿಗಳ ಒಡೆತನದ ಸುಮಾರು 1 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಗೆ ಸಿಐಡಿ ವರದಿಯನ್ನು ಸಲ್ಲಿಸಿದೆ.
ಬಸವನಗುಡಿಯಲ್ಲಿರುವ ಶ್ರೀ ಗುರುರಾಘವೇಂದ್ರ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ವ್ಯವಹಾರ ನಡೆಸಲಾಗಿದೆ. ಬ್ಯಾಂಕಿನ ಆಡಳಿತ ಮಂಡಳಿಯ ಅವ್ಯವಹಾರ ಬಯಲಿಗೆ ಬರುತ್ತಿದ್ದಂತೆಯೇ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದೆ. ಈ ನಡುವಲ್ಲೇ ಬ್ಯಾಂಕಿನ ಮಾಜಿ ಸಿಇಓ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ಬ್ಯಾಂಕಿನ ಅಧ್ಯಕ್ಷ ಸೇರಿದಂತೆ ಒಟ್ಟು 7 ಮಂದಿ ನಿರ್ದೇಶಕರನ್ನು ಸಿಐಡಿ ಬಂಧಿಸಿದೆ.
ಬ್ಯಾಂಕಿನ ಅಧ್ಯಕ್ಷ ಕೆ.ರಾಮಕೃಷ್ಣ ಹಾಗೂ ಅವರ ಪುತ್ರ, ಉಪಾಧ್ಯಕ್ಷ ನಿರ್ದೇಶಕ ಕೆ.ಆರ್.ವೇಣುಗೋಪಾಲ್ ಸೇರಿದಂತೆ ನಿರ್ದೇಶಕರು ಬಂಧಿತರಾಗಿದ್ದಾರೆ. ಬ್ಯಾಂಕಿಗೆ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ಆರೋಪಿಗಳು ಕೋಟ್ಯಂತರ ಹಣ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ವಿನಿಯೋಗಿಸಿ ಸಂಪಾದಿಸಿದ್ದ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಸಿಐಡಿ ಬ್ಯಾಂಕಿನ ಅವ್ಯವಹಾರದ ಕುರಿತು ವರದಿಯೊಂದನ್ನು ಸಿದ್ದ ಪಡಿಸಿದ್ದು ಆರೋಪಿಗಳಿಗೆ ಸೇರಿದ ಸುಮಾರು 1 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ಸಿಐಡಿ ವರದಿ ಸಲ್ಲಿಸಿದೆ.ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಆರೋಪಿಗಳಿಗೆ ಸೇರಿದ ಚರ ಮತ್ತು ಸ್ಥಿರ ಆಸ್ತಿಯನ್ನು ಗುರುತಿಸಲಾಗಿದೆ. ಅಲ್ಲದೇ ಸರ್ಕಾರದ ಮಾರ್ಗಸೂಚಿ ದರಪಟ್ಟಿ ಆಧರಿಸಿ ಆಸ್ತಿ ಮೌಲ್ಯವನ್ನು ಅಂದಾಜಿಸಲಾಗಿದೆ. ಸಾರ್ವಜನಿಕವಾಗಿ ಹರಾಜಿನ ಮೂಲಕ ಮಾರಾಟ ಮಾಡಿ ಬ್ಯಾಂಕ್ನ ಠೇವಣಿದಾರರಿಗೆ ಹಣ ಮರಳಿಸಲು ಕ್ರಮ ತೆಗೆದುಕೊಳ್ಳುವಂತೆ ಸಹ ಸಂಬಂಧಪಟ್ಟಇಲಾಖೆಗಳಿಗೆ ಕೋರಲಾಗಿದೆ ಎಂದು ತಿಳಿದುಬಂದಿದೆ.
ಗುರುರಾಘವೇಂದ್ರ ಬ್ಯಾಂಕಿನಲ್ಲಿ ಸುಮಾರು 1400 ಕೋಟಿ ಅಕ್ರಮ ವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಆದರೆ ಇದುವರೆಗಿನ ತನಿಖೆಯಲ್ಲಿ ಕಾನೂನುಬಾಹಿರವಾಗಿ ಆರೋಪಿಗಳು ಸುಮಾರು 400 ಕೋಟಿಯಷ್ಟು ಸಾಲ ಪಡೆದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಮುಖ್ಯವಾಗಿ 400 ಕೋಟಿ ರೂಪಾಯಿ ಸಾಲದಲ್ಲಿ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಸುಮಾರು 50 ಕೋಟಿ ರೂಪಾಯಿ ಸಾಲ ಪಡೆದಿರೋದು ಪತ್ತೆಯಾಗಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಕೂಡ ಸಿಐಡಿಗೆ ಲಭಿಸಿದೆ. ಈ ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಹೀಗೆ 500 ಕೋಟಿಯಷ್ಟು ಬಡ್ಡಿ ವಿಧಿಸಲಾಗಿದೆ. ಹೀಗಾಗಿ ಬ್ಯಾಂಕಿಗೆ ಒಟ್ಟಾರೆ 900 ಕೋಟಿ ಅಕ್ರಮ ನಡೆದಿದೆ ಎಂದು ಪತ್ತೆ ಹಚ್ಚಲಾಗಿದೆ. ಇನ್ನು ಲೆಕ್ಕ ಪರಿಶೋಧನೆ ಪ್ರಕ್ರಿಯೆ ಮುಂದುವರೆದಿದೆ ಎನ್ನಲಾಗುತ್ತಿದೆ.

400 ಕೋಟಿ ರೂಪಾಯಿ ಸಾಲವನ್ನು ಒಟ್ಟು 27 ಮಂದಿ ಪಡೆದಿದ್ದು, ಇದರದಲ್ಲಿ ಬ್ಯಾಂಕಿನ ಅಧ್ಯಕ್ಷ, ಆಡಳಿತ ಮಂಡಳಿಯ ಸದಸ್ಯರು, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಸೇರಿದಂತೆ ಹಲವು ಬೇನಾಮಿ ವ್ಯಕ್ತಿಗಳ ಹೆಸರಲ್ಲಿ ಅಕ್ರಮವಾಗಿ ಸಾಲವನ್ನು ಪಡೆಯಲಾಗಿದೆ. ಬ್ಯಾಂಕಿನಲ್ಲಿ ಒಟ್ಟು 1576 ಸಾಲ ಖಾತೆಗಳಿದ್ದು, ಈ ಪೈಕಿ 1,224 ಖಾತೆಗಳಿಗೆ ಸಂಬಂಧಿದಂತೆ ಯಾವುದೇ ದಾಖಲೆಗಳಿಲ್ಲ. ಇನ್ನು ಬ್ಯಾಂಕಿನಲ್ಲಿ ಒಟ್ಟು 40,661 ಗ್ರಾಹಕರಿದ್ದು, 231 ಕೋಟಿ ರೂಪಾಯಿಯನ್ನು ಠೇವಣಿ ಇರಿಸಲಾಗಿದೆ. ಠೇವಣಿದಾರ ಸಹಿಯನ್ನೇ ಪಡೆಯದೇ ಹಣದ ವರ್ಗಾವಣೆಯನ್ನು ಮಾಡಲಾಗಿದೆ.
ಇದೀಗ ಸಿಐಡಿ ತನಿಖೆಯನ್ನು ನಡೆಸುತ್ತಿದ್ದು, ಲೆಕ್ಕಪತ್ರ ಪರಿಶೋಧನಾ ಕಾರ್ಯ ಮುಂದುವರಿದಿದೆ. ಆದರೆ ಸಿಐಡಿ ಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿಲ್ಲದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕವಾಗಿರುವ ಕೆಪಿಐಡಿ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರ ಹಾಗೂ ಇಡಿ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿದೆ.