Children Vaccine : ಮೈಸೂರಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ

ಮೈಸೂರು : ದೇಶದಾದ್ಯಂತ ಕೊರೊನಾ ವಿರುದ್ದ ಹೋರಾಟ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಆದ್ರೆ ಮೈಸೂರಿನಲ್ಲಿ 30 ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ.

ಮೈಸೂರು ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಸದ್ಯ ಕೋವ್ಯಾಕ್ಸಿನ್ ಪಡೆದು 6 ದಿನಗಳೇ ಕಳೆದಿದೆ. ಎಲ್ಲಾ 30 ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ ಇಬ್ಬರು ಮಕ್ಕಳಿಗೆ ಮಾತ್ರವೇ ಜ್ವರ ಬಂದಿದೆ ಎಂದು ತಿಳಿದು ಬಂದಿದೆ.

ವಯಸ್ಕರಿಗೆ ನೀಡುವಷ್ಟೇ ಪ್ರಮಾಣದಲ್ಲಿಯೇ ಮಕ್ಕಳಿಗೂ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಎಲ್ಲಾ 30 ಮಕ್ಕಳ ಮೇಲೆ ಆಸ್ಪತ್ರೆಯ ವೈದ್ಯರ ತಂಡ ನಿಗಾ ಇರಿಸಿದೆ. ನಿತ್ಯವೂ ಮಕ್ಕಲ ಪೋಷಕರಿಗೆ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಲಾಗುತ್ತಿದೆ. ಎಲ್ಲಾ ಮಕ್ಕಳಿಗೂ ಸದ್ಯ ಮೊದಲ ಡೋಸ್ ನೀಡಲಾಗಿದ್ದು, ಒಂದು ತಿಂಗಳ ನಂತರ ರಕ್ತದ ಮಾದರಿಯನ್ನು ಪರೀಕ್ಷಿಸಿ ಎರಡನೇ ಡೋಸ್ ನೀಡಲು ಪ್ಲ್ಯಾನ್ ರೂಪಿಸಲಾಗಿದೆ ಎಂದು ಚೆಲುವಾಂಬ ಆಸ್ಪತ್ರೆಯ ಡಾ.ಪ್ರದೀಪ್ ಹಾಗೂ ಡಾ.ಪ್ರಶಾಂತ್ ತಿಳಿಸಿದ್ದಾರೆ.

2 ವರ್ಷದಿಂದ 6 ವರ್ಷ ಹಾಗೂ 6 ವರ್ಷದಿಂದ 12 ವರ್ಷ ವಯೋಮಿತಿಯ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಮಕ್ಕಳ ದೇಹದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಅನ್ನುವ ಕುರಿತು ಸದ್ಯ ಪರೀಕ್ಷೆ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 175 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿದ್ದು, ದೇಶದ 10 ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. 6 ತಿಂಗಳ ಕಾಲ ಮಕ್ಕಳ ಮೇಲಿನ ಪ್ರಯೋಗ ಮುಂದುವರಿಯಲಿದೆ.

Comments are closed.