ಗೋಮಾಂಸ ಸೇವನೆ ಮೂಲಭೂತ ಹಕ್ಕಲ್ಲ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಅಲಹಾಬಾದ್ ಹೈಕೋರ್ಟ್

ಅಲಹಾಬಾದ್‌ : ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಬಾದ್ ಹೈಕೋರ್ಟ್ ಹೇಳಿದೆ.

ಗೋವನ್ನು ಕದ್ದು, ಕೊಂದ ಆರೋಪದ ಮೇರೆಗೆ ಬಂಧಿತನಾಗಿದ್ದ ಸಾಂಬಲ್‌ ಜಿಲ್ಲೆಯ ಜಾವೇದ್‌ ನ ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಹಾಗೂ ಗೋ ಹತ್ಯೆ ಮಾಡುವವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನು ರೂಪಿಸಬೇಕು ಎಂದು ಹೇಳಿದ್ದು, ಆರೋಪಿಯ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.

ಇದನ್ನೂ ಓದಿ: ಕೊಲೆಯ ಸುಳಿವು ನೀಡಿತ್ತು ಒಂದು ಸೆಲ್ಫಿ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಮೂಲಭೂತ ಹಕ್ಕು ಗೋಮಾಂಸ ತಿನ್ನುವವರಿಗಷ್ಟೇ ಅಲ್ಲದೆ, ಗೋವುಗಳನ್ನು ಪೂಜಿಸುವ ಮತ್ತು ಅದರ ಮೇಲೆಯೇ ಆರ್ಥಿಕವಾಗಿ ಅವಲಂಬಿಸಿರುವವರಿಗೂ ಇದೆ. ಜೀವಿಸುವ ಹಕ್ಕು ಕೊಲ್ಲುವ ಹಕ್ಕನ್ನು ಮೀರಿದ್ದು ಮತ್ತು ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕಾಗಿ ಪರಿಗಣಿಸಲಾಗದು. ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಅಪರಾಧಕ್ಕೂ ಮುನ್ನ, ಅವರು ಹಲವು ಗೋ ಹತ್ಯೆಯನ್ನು ಮಾಡಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯವನ್ನು ಕದಡಿದೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಮತ್ತೆ ಅದೇ ಅಪರಾಧ ಎಸಗುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಗೋವಿನ ಮಹತ್ವವನ್ನು ಹಿಂದೂಗಳಂತೆಯೇ ಮುಸ್ಲಿಂ ಆಡಳಿತಗಾರರು ಅರ್ಥ ಮಾಡಿ ಕೊಂಡಿದ್ದರು. ಗೋವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ ಎಂದು ಅವರೂ ಪರಿಗಣಿಸಿದ್ದರು. ಉದಾಹರಣೆಗೆ ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಗೋವುಗಳ ಬಲಿ ನಿಷೇಧಿಸಿದ್ದರು ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದ್ದಲ್ಲದೆ ಮೈಸೂರಿನ ಆಡಳಿತಗಾರ ಹೈದರ್ ಅಲಿ ಆಡಳಿತಾವಧಿಯಲ್ಲಿ ಕೂಡ ಗೋಹತ್ಯೆ ಶಿಕ್ಷಾರ್ಹ ಅಪರಾಧವಾಗಿತ್ತು.

ಇದನ್ನೂ ಓದಿ: ವಿಸ್ಮಯ ನಿಗೂಢ ಸಾವು : ಪತಿ ಆರ್‌ಟಿಓ ಇನ್‌ಸ್ಪೆಕ್ಟರ್‌ ಸೇವೆಯಿಂದ ವಜಾ

ಒಂದು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆ ಉಂಟಾದರೆ ದೇಶವು ದುರ್ಬಲವಾಗುತ್ತದೆ. ಆದ್ದರಿಂದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಗೋ ರಕ್ಷಣೆಯ ಹೆಸರಿನಲ್ಲಿ ಗೋವುಗಳಿಗೆ ಆಶ್ರಯ ಕಲ್ಪಿಸಿ ಹಣಗಳಿಕೆಯಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸರ್ಕಾರ ಕಾನೂನುಗಳನ್ನು ತರಬೇಕು ಎಂದು ನ್ಯಾಯಾಲಯ ಸೂಚಿಸಿದೆ.

(Alahabad high court recommended to declare cow as a National Animal)

Comments are closed.