Ayodhya :ಅಯೋಧ್ಯೆಯಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ನಿರ್ಮಾಣವಾಗಲಿದೆ ರಾಮನ ವಿಗ್ರಹ

ಉತ್ತರ ಪ್ರದೇಶ : Ayodhya : ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಮುಖರ ಮಹತ್ವದ ಸಭೆ ನಡೆದಿದೆ. ಅಯೋಧ್ಯ ರಾಮ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಟಾಪಿಸುವ ಮಹತ್ವದ ತೀರ್ಮಾನವನ್ನು ಸಮಿತಿ ಕೈಗೊಂಡಿದೆ.

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆಯಲ್ಲಿ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ಈ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಟ್ರಸ್ಟಿನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕಾರ್ಯದರ್ಶಿಗಳಾದ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಸ್ವಾಮೀಜಿ ಭಾಗಿಯಾಗಿದ್ದರು. ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪನೆಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈ ನಡುವೆ ಕರ್ನಾಟಕದ ಭಕ್ತರಿಂದ ಮಂದಿರಕ್ಕೆ ಸ್ವರ್ಣ ಶಿಖರ ಅರ್ಪಿಸುವ ಭಕ್ತರ ಬೇಡಿಕೆಯನ್ನು
ಪೇಜಾವರ ಶ್ರೀ ಸಭೆಯ ಮುಂದಿಟ್ಟರು. ಭವ್ಯ ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸುವ ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಸಭೆಯಲ್ಲಿ ಪೇಜಾವರ ಶ್ರೀ ಮಂಡಿಸಿದರು. ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರ ನಿರ್ಮಾಣದ ಇಚ್ಛೆ ವ್ಯಕ್ತಪಡಿಸಿದ್ದು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನೀಡುವ ಯೋಜನೆ ಬಗ್ಗೆ ತಿಳಿಸಿದರು. ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆ ಇದಾಗಿದೆ.

ಪ್ರಾರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಆದ್ರೆ ಇದೀಗ ಜಿಎಸ್ ಟಿ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ತಗಲಬಹುದೆಂದು ಅಂದಾಜು ಮಾಡಲಾಗಿದೆ. ಹೀಗಾಗಿ ಮಂದಿರ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

ವಿಶೇಷ ಅಂದ್ರೆ ಮಂದಿರ ನಿರ್ಮಾಣಕ್ಕೆ ವೆಚ್ಚ ಹೆಚ್ಚಾದರೂ ದೇಣಿಗೆಯ ಮಹಾಪೂರವೇ ಹರಿದು ಬಂದಿದೆ. ಮಂದಿರಕ್ಕಾಗಿ ದೇಶಾದ್ಯಂತ ಭಕ್ತರಿಂದ ಉತ್ತಮ ದೇಣಿಗೆ ಸಂಗ್ರಹವಾಗಿದೆ. ದೇಣಿಗೆ ಸಂಗ್ರಹ ಅಭಿಯಾನದಿಂದ ಸಾವಿರ ಕೋಟಿಗೂ ಮೀರಿದ ಮೂಲಧನ ಬಂದಿದೆ. ಪ್ರತಿ ತಿಂಗಳು ಸುಮಾರು 50 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹವಾಗುತ್ತಿದೆ. ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದ ಉದಾಹರಣೆ ಇದೆ. ಈವರೆಗೆ ಅಂದಾಜು 300 ಕೋಟಿ ರೂಪಾಯಿ ಖರ್ಚಾಗಿದ್ದು ಸಾರ್ವಜನಿಕ ದೇಣಿಗೆಯಿಂದಲೇ ಖರ್ಚು ಬರಿಸಲಾಗುತ್ತಿದೆ ಎಂದು ನಿರ್ವಾಹಕರು ಸಭೆಗೆ ಮಾಹಿತಿ ನೀಡಿದ್ದಾರೆ.

ಮಂದಿರ ನಿರ್ಮಾಣಕ್ಕೆ ಮಹಾರಾಷ್ಟ್ರ ದಿಂದ ಸಾಗುವಾನಿ ಮರ ತರಿಸಿಕೊಳ್ಳಲು ತೀರ್ಮಾನ ಮಾಡಲಾಗಿದ್ದು ಇದರ ಖರ್ಚು ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಯಿತು. ಇನ್ನು ಮೂಲಧನದ ಸಮ್ಯಕ್ ನಿರ್ವಹಣೆ ಮಾಡಬೇಕಾದ ಕುರಿತಾಗಿಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಒಟ್ಟಿನಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಮಂದಿರವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಭಕ್ತಗಣ ಕಾಯುತ್ತಿದ್ದಾರೆ.

ಇದನ್ನು ಓದಿ : fishermen are worried :ಕಡಲಿನಲ್ಲಿ ಪದೇ ಪದೇ ತೂಫಾನ್, ಆತಂಕದಲ್ಲಿ ಮೀನುಗಾರರು

ಇದನ್ನೂ ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

An idol of Rama will be built in white stone mixed with blue in Ayodhya

Comments are closed.