ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವು ಹಾಗೂ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 8 ರಂದು ಎನ್ ಸಿಬಿ ವಿಚಾರಣೆಗೆ ಹಾಜರಾಗಿದ್ದ ವೇಳೆಯಲ್ಲಿ ರಿಯಾ ಚಿಕ್ರವರ್ತಿಯನ್ನು ಬಂಧಿಸಲಾಗಿತ್ತು. ಸುಶಾಂತ್ ಸಿಂಗ್ ಸಾವಿನ ತನಿಖೆಯ ವೇಳೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪವೂ ರಿಯಾ ಚಕ್ರವರ್ತಿಯ ವಿರುದ್ದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುತ್ತಿರುವ ಎನ್ ಸಿಬಿ ವಿಶೇಷ ನ್ಯಾಯಾಲಯ ರಿಯಾ ಚಕ್ರವರ್ತಿ ಸೇರಿದಂತೆ 20 ಮಂದಿ ಆರೋಪಿಗಳಿಗೆ ಅಕ್ಟೋಬರ್ 20ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.

ಈ ನಡುವಲ್ಲೇ ಸಿಬಿಐ ಶಿಫಾರಸ್ಸಿನ ಮೇರೆಗೆ ಎನ್‍ಸಿಬಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಎನ್ ಸಿಬಿ ವಿಚಾರಣೆ ನಡೆಸಿತ್ತು.

ಎನ್ ಸಿಬಿ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲೀಗ ರಿಯಾ ಚಕ್ರವರ್ತಿ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಆದರೆ ರಿಯಾ ಚಕ್ರವರ್ತಿ ಸಹೋದರನ ಶೌವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.