ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಪಕ್ಷಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 11.30ಕ್ಕೆ ಭೇಟಿಯಾಗಲಿರುವ ನಿಯೋಗ ಸಿಎಂಗೆ ಹಲವು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ. ಅಲ್ಲದೇ ಸರಕಾರಕ್ಕೆ ಹಲವು ಸಲಹೆಗಳನ್ನು ಕೂಡ ನಿಯೋಗ ನೀಡಲಿದೆ.
ಬಡಗಿ, ಕಮ್ಮಾರ, ಚಮ್ಮಾರ, ಅಕ್ಕಸಾಲಿಗ ಇನ್ನಿತರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೆಲವೇ ವರ್ಗಕ್ಕೆ ಪ್ಯಾಕೇಜ್ ಘೋಷಿಸಿದೆ. ಹೀಗಾಗಿ ಇವರಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ನೆರವು ಒದಗಿಸುವುದರ ಜೊತೆಗೆ ಅವರು ಊರಿಗೆ ವಾಪಸ್ ಆಗುವುದಕ್ಕೆ ತಡೆ ನೀಡಬಾರದು. ಇನ್ನು ಹೂ ಬೆಳೆಗಾರರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ ಉಳಿದ ರೈತಾಪಿ ವರ್ಗ, ಕೃಷಿ ಕೂಲಿ ಕಾರ್ಮಿಕರ ಗತಿಯೇನು? ಎಲ್ಲಾ ರೈತರ ಕುಟುಂಬಗಳು ಬೀದಿಗೆ ಬಂದು ನಿಂತಿವೆ. ಕೂಡಲೇ ರೈತರಿಗೆ ಆರ್ಥಿಕ ನೆರವು ಘೋಷಿಸಬೇಕು.

ಮುಂಗಾರು ಪ್ರಾರಂಭವಾಗಿದ್ದು ರಸಗೊಬ್ಬರ, ಬಿತ್ತನೆ ಬೀಜಕ್ಕೆ ಸಾಲ ಸೌಲಭ್ಯಕಲ್ಪಿಸಬೇಕಿದೆ. ಗಾರ್ಮೆಂಟ್ಸ್ ನಲ್ಲಿ ದುಡಿಯುವ ವರ್ಗವೂ ಸಂಕಷ್ಟದಲ್ಲಿದೆ, ಹೀಗಾಗಿ ಇವರ ಬದುಕಿಗೂ ಪರಿಹಾರ ಒದಗಿಸಿಕೊಡುವಂತೆ ಪ್ರತಿಪಕ್ಷಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದಾರೆ.
ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಹೆಚ್.ಕೆ ಪಾಟೀಲ್, ರಮೇಶ್ ಕುಮಾರ್, ಜೆಡಿಎಸ್ ನಾಯಕರಾದ ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ್, ಸಿಪಿಐಎಂನ ನಾಗರಾಜು, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಎಎಪಿಯ ಪೃಥ್ವಿರೆಡ್ಡಿ, ಕನ್ನಡ ಚಳುವಳಿ ಪಕ್ಷದ ವಾಟಾಳ್ ಸೇರಿ ಹಲವು ಮುಖಂಡರು ಭೇಟಿಯಾಗಲಿದ್ದಾರೆ.