ಭುವನೇಶ್ವರ/ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿರುವ ‘ಜವಾದ್’ ಚಂಡಮಾರುತವು ಇನ್ನು 12 ತಾಸಿನಲ್ಲಿ ಪೂರ್ಣವಾಗಿ ರೂಪುಗೊಳ್ಳಲಿದ್ದು, ತಾಸಿಗೆ 132 ಕಿ.ಮೀ. ವೇಗದಲ್ಲಿ ಬೀಸಲಿದೆ. ವಿಶಾಖಪಟ್ಟಣದಿಂದ 580 ಕಿ.ಮೀ. ದೂರದ ಆಗ್ನೇಯ ಭಾಗದಿಂದ ಚಂಡಮಾರುತ ಬೀಸಲಿದ್ದು, ಇದು ಒಡಿಶಾದ ಗೋಪಾಲಪುರ್‌ನಿಂದ 670 ಕಿ.ಮೀ. ಮತ್ತು ಪಾರಾದೀಪ್ ನಿಂದ 760 ಕಿ.ಮೀ. ದೂರದಲ್ಲಿ ಶುಕ್ರವಾರ ಸ್ಥಿತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಒಡಿಶಾ ದಕ್ಷಿಣ ಮತ್ತು ಆಂಧ್ರ ಪ್ರದೇಶದ ಉತ್ತರ ಕರಾವಳಿಗೆ ಶನಿವಾರ ಸಂಜೆ ಅಪ್ಪಳಿಸುವ ಸಂಭವ ಇದ್ದು, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ವ್ಯಾಪಕ ಮಳೆ ಸುರಿಯಲಿದೆ. ವಾಯುಭಾರ ಕುಸಿತ ಪರಿಣಾಮ ಈಗಾಗಲೇ ಅನೇಕ ಕಡೆಗಳಲ್ಲಿ ಮಳೆ ಆರಂಭವಾಗಿದೆ ಎಂದು ಐಎಂಸಿ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿರುಸಿನ ಪರಿಹಾರ ಕಾರ್ಯಗಳು ಸಾಗಿವೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡದ 62 ತಂಡಗಳನ್ನು ಆಂಧ್ರ ಪ್ರದೇಶದ ಉತ್ತರ ಮತ್ತು ಒಡಿಶಾದ ದಕ್ಷಿಣ ಕರಾವಳಿಯ 13 ಜಿಲ್ಲೆಗಳಿಗೆ ನಿಯೋಜಿಸಲಾಗಿದೆ.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ‘ಜವಾದ್’ ಚಂಡಮಾರುತದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಒಡಿಶಾ ಮತ್ತು ಆಂಧ್ರ ಪ್ರದೇಶಗಳಿಗೆ ಅಗತ್ಯ ನೆರವನ್ನು ನೀಡುವಂತೆ ತಿಳಿಸಿದ್ದಾರೆ. ಅಪಾಯದ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರ ಮಾಡಲು ಹೇಳಿದ್ದಾರೆ.
ಈ ನಡುವೆಯೇ ಪೂರ್ವ ಕರಾವಳಿ ರೈಲ್ವೆ ವಲಯವು 95 ರೈಲುಗಳ ಸಂಚಾರವನ್ನು ಶುಕ್ರವಾರದಿಂದಲೇ 3 ದಿನಕ್ಕೆ ಅನ್ವಯವಾಗುವಂತೆ ರದ್ದು ಮಾಡಿದೆ. ಪ್ರಯಾಣಿಕರ ಸುರಕ್ಷತೆಯನ್ನು ಆಧರಿಸಿ ಈ ನಿರ್ಣಯ ಕೈಗೊಂಡಿರುವುದಾಗಿ ರೈಲ್ವೆ ಇಲಾಖೆಯು ಮಾಹಿತಿ ನೀಡಿದೆ.
ಇದನ್ನೂ ಓದಿ: GOOD NEWS ಕೊಟ್ಟ ರಾಜ್ಯ ಸರ್ಕಾರ : 30 ಲಕ್ಷ ರೈತರಿಗೆ ಸಿಗಲಿದೆ 20,810 ಕೋಟಿ ಕೃಷಿ ಸಾಲ
(Cyclone Jawad updated news in Kannada)