ಭೋಪಾಲ್ : ದೇಶದ ಎಷ್ಟೇ ಮುಂದುವರಿದರೂ ಕೂಡ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತಿ ಪದ್ದತಿ ಇಂದಿಗೂ ಜೀವಂತವಾಗಿದೆ. ಇದು ದೇಶದ ಅಭಿವೃದ್ದಿ ಕಪ್ಪು ಚುಕ್ಕೆಯೆನಿಸಿದೆ. ಈ ನಡುವಲ್ಲೇ ದಲಿತ ಯುವಕನೋರ್ವನನ್ನು ಮದುವೆಯಾಗಿದ್ದಾಳೆ ಅನ್ನೋ ಕೋಪಕ್ಕೆ ತಂದೆಯೇ ಮಗಳನ್ನು ಅರೆ ನಗ್ನಗೊಳಿಸಿದ ಕರಾಳ ಘಟನೆ ಭೋಪಾಲ್‌ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್‌ನ ಛೋಪ್ನಾ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ್ದು ತಪ್ಪು ಎಂದು ತಂದೆ ತನಗೆ ಕೊಟ್ಟಿರುವ ಹಿಂಸಾಚಾರ ಹಾಗೂ ನಡೆಸಿದ ಕ್ರೂರ ಘಟನೆಗಳ ಕುರಿತು ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರು ನೀಡಿದ್ದಾಳೆ. ತಮಗಿಬ್ಬರಿಗೂ ಹೆತ್ತವರಿಂದ ರಕ್ಷಣೆ ಕೋರಿರುವ ಆಕೆ, ಮರ್ಯಾದಾ ಹತ್ಯೆಯಾಗುವ ಸಾಧ್ಯತೆ ಇದ್ದು, ತಂದೆ ಮತ್ತು ಕುಟುಂಬಸ್ಥರಿಂದ ಇಬ್ಬರಿಗೂ ಜೀವ ಭಯವಿದೆ ಎಂದು ಯುವತಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾಳೆ.
ಯುವತಿ ನೀಡಿದ ದೂರಿನ ಬೆನ್ನಲ್ಲೇ 4 ಮಂದಿಯ ವಿರುದ್ದ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಯುವತಿ ಬೈತೂಲ್ ಪಟ್ಟಣದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದ ವರ್ಷ ಮಾರ್ಚ್ 11 ರಂದು ಇಬ್ಬರ ಮದುವೆ ನಡೆದಿತ್ತು. ಈ ವಿಷಯ ತಿಳಿಯುತಿದ್ದಂತೆ ಯುವತಿಯ ತಂದೆ ಆಕೆಗಾಗಿ ಹುಡುಕಾಟ ನಡೆಸಿ ಪೊಲೀಸರನ್ನು ಕರೆತಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ನಂತರ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಆದರೆ ಯುವತಿ ಅಕ್ಟೋಬರ್ 28ರಂದು ಅಲ್ಲಿಂದ ತಪ್ಪಿಸಿಕೊಂಡು ಪುನಃ ಪತಿಯ ಮನೆ ಸೇರಿಕೊಂಡಿದ್ದಳು.
ಅಷ್ಟಕ್ಕೂ ಸುಮ್ಮನಾಗದ ನನ್ನ ತಂದೆ ಪತಿಯ ಮನೆಗೆ ಬಂದು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ನಂತರ ನರ್ಮದಾ ನದಿಗೆ ಕರೆದುಕೊಂಡು ಹೋಗಿ. ಅಲ್ಲಿ ನನ್ನ ತಂದೆ ಹಾಗೂ ನಾಲ್ಕು ಮಂದಿ ಸೇರಿ ನನ್ನನ್ನು ಅರೆಬೆತ್ತಲೆ ಮಾಡಿದರು. ನನಗೆ ಹಿಂಸೆ ತಾಳಲು ಆಗುತ್ತಿರಲಿಲ್ಲ. ಆದರೂ ಬಲವಂತದಿಂದ ಅರೆನಗ್ನಗೊಳಿಸಿದರು. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದ್ದಕ್ಕೆ ದಲಿತನನ್ನು ಮದುವೆಯಾಗಿರುವುದಕ್ಕೆ ಇದು ಶುದ್ಧೀಕರಣ ಮಾಡುತ್ತಿರುವುದು ಎಂದರು. ನಂತರ ನದಿಯಲ್ಲಿ ಮುಳುಗಿಸಿದರು, ಕೂದಲು ಕತ್ತರಿಸಿದರು. ಬಟ್ಟೆಯನ್ನು ಅಲ್ಲೇ ಎಸೆಯಲು ಹೇಳಿದರು. ಅವರು ಹೊಸ ಬಟ್ಟೆ ತಂದಿದ್ದರು, ಸಾಲದು ಎನ್ನುವುದಕ್ಕೆ ಎಂಜಲು ಊಟ ತಿನ್ನಿಸಿದರು ಎಂದು ಭಯಾನಕ ಘಟನೆಯ ಬಗ್ಗೆ ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿ : ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿದ ಪತಿ !
ಇಷ್ಟೆಲ್ಲಾ ನಡೆದ ನಂತರ ನೀನು ಈಗ ಶುದ್ಧವಾಗಿರುವೆ ಈಗ ಹೋಗಿ ನಿನ್ನ ಗಂಡನಿಗೆ ವಿಚ್ಛೇದನ ಕೊಡು ಎಂದು ಒತ್ತಾಯ ಮಾಡುತ್ತಿದ್ದಾರೆ. ನಮ್ಮದೇ ಜಾತಿಯ ಹುಡುಗನೊಟ್ಟಿಗೆ ಮದುವೆ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಮಾತು ಕೇಳದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ಹೇಳಿರುವ ಯುವತಿ, ಇಬ್ಬರ ರಕ್ಷಣೆಗೆ ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೇ ಯುವತಿ ತನ್ನ ರಕ್ಷಣೆಗಾಗಿ ಮಾಧ್ಯಮಗಳ ಮುಂದೆಯೂ ತಂದೆಯ ವಿರುದ್ದ ಗಂಭೀರವಾಗಿರುವ ಆರೋಪಗಳನ್ನು ಮಾಡಿದ್ದಾಳೆ.
(The father who stripped his daughter half-naked for making Intercast marriage!)