Jallianwal Bagh Massacre: ಭಾರತ ಕಂಡ ಘೋರ ದುರಂತ ಜಲಿಯನ್‌ ವಾಲ್‌ ಬಾಗ್‌ ಹತ್ಯಾಕಂಡಕ್ಕೆ ಇಂದಿಗೆ 104 ವರ್ಷ

ಅಮೃತ್‌ ಸರ : (Jallianwal Bagh Massacre) ಭಾರತ ಸ್ವಾತಂತ್ರ್ಯ ಹೋರಾಟದ ಕೆಚ್ಚು ಹೆಚ್ಚಿಸಿದ ಘಟನೆ ‘ಜಲಿಯನ್ ವಾಲಾಬಾಗ್’ ಹತ್ಯಾಕಾಂಡ. ಬ್ರಿಟಿಷರ ಬಗ್ಗೆ ಭಾರತೀಯರಲ್ಲಿ ಇದ್ದ ಸಹಾನುಭೂತಿಯು ಆಕ್ರೋಶದ ಕಿಚ್ಚಾಗಿ ಮಾರ್ಪಟ್ಟ ದಿನ ಏಪ್ರಿಲ್ 13, 1919. ಅಂದು ನಡೆದ ದುರಂತವನ್ನು ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಅಥವಾ ‘ಅಮೃತ್‌ಸರ್‌ ಹತ್ಯಾಕಾಂಡʼ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ನಡೆದ ಅತ್ಯಂತ ಘೋರ ಹಾಗೂ ಅಮಾನವೀಯ ದುರಂತವಿದು. ಈ ಘಟನೆ ನಡೆದು ಇಂದಿಗೆ 104 ವರ್ಷಗಳು ಸಂದಿವೆ.

1919ರ ಏಪ್ರಿಲ್‌ 13ರಂದು ಜಲಿಯನ್‌ ವಾಲಾಬಾಗ್‌ ದುರಂತ ನಡೆದಿತ್ತು. ಆ ದಿನ ಅಮೃತ್‌ಸರದ ಜಲಿಯನ್ ವಾಲಾಬಾಗ್‌ ಎಂಬ ಪ್ರದೇಶದಲ್ಲಿ ಬ್ರಿಟಿಷ್‌ ಪಡೆಗಳು ನಿರಾಯುಧ ಭಾರತೀಯರ ಗುಂಪಿನ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಈ ಘೋರ ದುರಂತದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ರಾಷ್ಟ್ರೀಯವಾದಿ ನಾಯಕರಾದ ಸತ್ಯ ಪಾಲ್‌ ಹಾಗೂ ಡಾ. ಸೈಫುದ್ದೀನ್‌ ಕಿಚ್ಲೆವ್‌ ಅವರನ್ನು ಬಂಧಿಸಿದ್ದಕ್ಕಾಗಿ ಪ್ರತಿಭಟನೆ ನಡೆಸುವ ಉದ್ದೇಶದಿಂದ ಜಲಿಯನ್‌ ವಾಲಾಬಾಗ್‌ ಪ್ರದೇಶದಲ್ಲಿ ಜನರು ಗುಂಪುಗೂಡಿದ್ದರು. ಅಂದು ಮಾರ್ಷಲ್‌ ನಿಯಮ (ಒಂದು ಪ್ರದೇಶದಲ್ಲಿ ಐದು ಜನಕ್ಕಿಂತ ಹೆಚ್ಚು ಸೇರುವಂತಿರಲಿಲ್ಲ) ವನ್ನು ಉಲ್ಲಂಘಿಸಿ ಸಮಾವೇಶ ನಡೆಸಲಾಗುತ್ತಿತ್ತು. ಅಲ್ಲದೇ ಅದು ಸಿಖ್‌ ಸಮುದಾಯದ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನವು ಹೌದು.

ಶಸ್ತ್ರಸಜ್ಜಿತ 90 ಸೈನಿಕರಿದ್ದ ಬ್ರಿಟಿಷ್‌ ತುಕಡಿ ಮೆಷಿನ್‌ಗನ್‌ಗಳನ್ನು ಅಳವಡಿಸಿದ್ದ ಎರಡು ವಾಹನಗಳಲ್ಲಿ ಬಂದು, ಉದ್ಯಾನದಲ್ಲಿ ನೆರೆದಿದ್ದವರಿಗೆ ಮುನ್ಸೂಚನೆ ನೀಡದೆ, ಹೊರಗೆ ಓಡಲು ಅವಕಾಶ ನೀಡದೆ ಗುಂಡಿನ ಮಳೆಗರೆದಿದ್ದರು. ಸುಮಾರು 15 ನಿಮಿಷಗಳ ಕಾಲ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬಹಳಷ್ಟು ಮಂದಿ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದ್ದಾರೆ. ಸ್ಮಾರಕದಲ್ಲಿ ಸಿಗುವ ಮಾಹಿತಿ ಪ್ರಕಾರ ಬಾವಿಯೊಳಗಿಂದಲೇ ಸುಮಾರು 120 ಶವಗಳನ್ನು ಹೊರಗೆ ತೆಗೆಯಲಾಗಿದೆಯಂತೆ. ಆ ಹತ್ತೇ ಹತ್ತು ನಿಮಿಷಗಳಲ್ಲಿ ನೆರೆದಿದ್ದ ಸಾವಿರಾರು ಜೀವಗಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸುಮಾರು 2000ದಷ್ಟು ಜನರು ಗಾಯಗೊಂಡಿದ್ದರು ಎನ್ನಲಾಗುತ್ತದೆ.

ಇದನ್ನೂ ಓದಿ : Rozgar Mela 2023: ಇಂದು 71,000 ನೇಮಕಾತಿ ಪತ್ರ ವಿತರಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಈ ಘಟನೆಯು ಭಾರತದ ಆಧುನಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವಿಗೆ ಕಾರಣವಾಗಿತ್ತು. ಈ ದಾರುಣ ಕೃತ್ಯದ ನಂತರ ಗಾಂಧೀಜಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ದೃಢನಿರ್ಧಾರಕ್ಕೆ ಬಂದರು. ಅಲ್ಲದೆ ಈ ಘಟನೆಯು ಭಾರತ ಹಾಗೂ ಬ್ರಿಟಿಷ್‌ ಸಂಬಂಧದ ಮೇಲೆ ಶಾಶ್ವತ ಬರೆಯನ್ನು ಎಳೆದಿತ್ತು. ಇದು ಬ್ರಿಟಿಷರ ಅಮಾನವೀಯ ಧೋರಣೆಯನ್ನು ಬಯಲುಗೊಳಿಸಿತ್ತು. ಇದಷ್ಟೇ ಅಲ್ಲದೇ ಅಂದು ನಡೆದ ಗುಂಡಿನ ದಾಳಿಯ ಗುರುತುಗಳು ಇಂದಿಗೂ ಕೂಡ ಅಮೃತ್‌ ಸರದ ಸ್ಮಾರಕದಲ್ಲಿದೆ.

Jallianwal Bagh Massacre: Today marks 104 years of Jallianwal Bagh Massacre, India’s worst tragedy.

Comments are closed.