ಕಾಸರಗೋಡು: ಪಬ್ ಜೀ ಆಟದ ಗೀಳು ಹತ್ತಿಸಿಕೊಂಡಿದ್ದ ಮಕ್ಕಳಿಬ್ಬರು ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 1 ಲಕ್ಷ ರೂಪಾಯಿ ಎಗಿಸಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ.

9ಮತ್ತು 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಹೋದರರಿಬ್ಬರು ಪಬ್ ಜೀ ಆಟದ ಗೀಳು ಹೊತ್ತಿಸಿಕೊಂಡಿದ್ದಾರೆ. ಆಟಕ್ಕೆ ಹಣ ಬೇಕಾದಾಗ ಸ್ನೇಹಿತನೋರ್ವನ ಸಹಕಾರ ದಿಂದ ತಾಯಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ. ಇಂಟರ್‌ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಇತರ ಮಾಹಿತಿಯನ್ನು ತಿಳಿದುಕೊಂಡು ಖಾತೆಯಿಂದ 1 ಲಕ್ಷ ರೂಪಾಯಿ ಯನ್ನು ಎಗರಿಸಿದ್ದಾರೆ.

ಮಕ್ಕಳ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆನ್‌ಲೈನ್ ಕ್ಲಾಸ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಪೋನ್ ಹಾಗೂ ಲ್ಯಾಪ್‌ಟಾಪ್ ಖರೀದಿಸಿಕೊಟ್ಟಿದ್ದರು. ಮಕ್ಕಳು ನಿತ್ಯವೂ ಆನ್‌ಲೈನ್ ಕ್ಲಾಸ್ ಮುಗಿಯುತ್ತಿದ್ದಂತೆಯೇ ಪಬ್ ಜೀ ಆಟದಲ್ಲಿ ಮಗ್ನರಾಗಿರುತ್ತಿದ್ದರು. ಆದರೆ ಆಟದಲ್ಲಿ ಮುಂದಿನ ಹಂತಕ್ಕೆ ತಲುಪಲು ಹಣದ ಅಗತ್ಯತೆ ಎದುರಾಗಿತ್ತು. ಈ ವೇಳೆ ಯಲ್ಲಿ ಮಕ್ಕಳು ಮಾಡಿದ್ದು ತಾಯಿಯ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಕೆಲಸ.

ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಪಬ್ ಜೀ ಆಟಕ್ಕೆ ವಿನಿಯೋಗ ಮಾಡಿದ್ದರು. ಆದರೆ ಬ್ಯಾಂಕ್ ಖಾತೆಯಿಂದ ಹಣ ವಿಥ್ ಡ್ರಾ ಆಗಿರೋದನ್ನು ಗಮನಿಸಿದ ತಾಯಿ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಇನ್ಸ್‌ಪೆಕ್ಟರ್ ಪಿ.ರಾಜೇಶ್ ಅವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.