Manmohan Singh: ಎಲ್ಲಾದಕ್ಕೂ ಏಕೆ ಜವಾಹರಲಾಲ್ ನೆಹರೂರನ್ನೇ ಟೀಕಿಸುತ್ತೀರಿ? ಮೋದಿಗೆ ಸವಾಲೆಸೆದ ಮನಮೋಹನ್ ಸಿಂಗ್

ಎಲ್ಲಾದಕ್ಕೂ ಏಕೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರನ್ನೇ ಟೀಕಿಸುತ್ತೀರಿ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಟೀಕಿಸಿದ್ದಾರೆ. ಪ್ರಧಾನಿ ಹುದ್ದೆಗೆ ಒಂದು ಘನತೆ ಇದೆ. ಅದನ್ನಾದರೂ ಮೋದಿಯವರು ಲೆಕ್ಕಿಸಬೇಕು ಎಂದು ಪಂಜಾಬ್‌ ಚುನಾವಾಣೆಯ (Punjab Elections) ಹಿನ್ನೆಲೆಯಲ್ಲಿ ಮಾಡಿರುವ ವಿಡಿಯೋ ಭಾಷಣದಲ್ಲಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಪ್ರಧಾನಿ ಹುದ್ದೆಯ ಘನತೆ ಎನೆಂಬುದನ್ನು ನಾನೂ ಅನುಭವಿಸಿರುವೆ. ನಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇತಿಹಾಸವನ್ನು ದೂಷಿಸುವುದು ತರವಲ್ಲ. ನಾನು ಪ್ರಧಾನಿಯಾಗಿದ್ದ ಹತ್ತು ವರ್ಷ ನಾನು ಕೆಲಸದ ಮೂಲಕವೇ ಮಾತನಾಡಿದೆ. ವಿಶ್ವದ ಮುಂದೆ ದೇಶ ಎಂದೂ ತಲೆತಗ್ಗಿಸುವ ಕೆಲಸವನ್ನು ಮಾಡಲಿಲ್ಲ ಎಂದಿದ್ದಾರೆ.

ಹಣದುಬ್ಬರದಿಂದ ಜನರು ಬಸವಳಿದಿದ್ದಾರೆ. ಇನ್ನೊಂದೆಡೆ, ನಿರುದ್ಯೋಗದಿಂದ ಯುವ ಜನರು ಬೇಸತ್ತಿದ್ದಾರೆ. ಈ ತಪ್ಪುಗಳನ್ನು ಒಪ್ಪಿಕೊಳ್ಳದ ಈ ಸರ್ಕಾರ, ಪ್ರತಿಯೊಂದಕ್ಕೂ ಪಂಡಿತ್‌ ನೆಹರೂ ಅವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಏಳು ವರ್ಷದಿಂದ ಮಾಡುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಆರ್ಥಿಕ ನೀತಿಯೇ ಅರ್ಥವಾಗುವುದಿಲ್ಲ. ವಿದೇಶಿ ನೀತಿಯಂತೂ ವಿಫಲದ ಮೂಟೆಯಾಗಿದೆ. ಚೀನಾ ಗಡಿದಾಟಿ ಬಂದು ಸವಾಲು ಹಾಕುತ್ತಿದೆ. ವಿದೇಶಿ ನಾಯಕರನ್ನು ಬಲವಂತದಿಂದ ಅಪ್ಪಿಕೊಳ್ಳುವುದು ಪ್ರಬಲ ವಿದೇಶಾಂಗ ನೀತಿ ಎನಿಸಲಾರದು ಎಂದು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ನನ್ನ ವಿರುದ್ಧವೂ ಸುಳ್ಳು ಆರೋಪಗಳನ್ನು ಮಾಡಲಾಯಿತು. ದುರ್ಬಲ ಪ್ರಧಾನಿ ಎಂದು ಅಪಪ್ರಚಾರ ನಡೆಯಿತು. ಭ್ರಷ್ಟಾಚಾರದ, ಮೌನಿಯಾದ ಪ್ರಧಾನಿ ಎಂದೆಲ್ಲಾ ಟೀಕಿಸಿದರು. ಆದರೆ, ನಾನು ಈ ಬಗ್ಗೆ ತಲೆಕಡೆಸಿಕೊಳ್ಳಲಿಲ್ಲ. ಈಗ ಬಿಜೆಪಿಯ ಬಂಡವಾಳ ಏನು ಎಂಬುದು ಈಗ ಬಹಿರಂಗವಾಗುತ್ತಿದೆ. ಅದರ ಬಿ ಮತ್ತು ಸಿ ತಂಡಗಳ ಹಗರಣಗಳು ಜನರ ಮುಂದೆ ತೆರೆದುಕೊಳ್ಳುತ್ತಿದೆ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ದೇಶವನ್ನು ಎಂದೂ ವಿಭಜಿಸಲಿಲ್ಲ ಅಥವಾ ಯಾವುದೇ ಸತ್ಯವನ್ನು ಮರೆಮಾಚಲಿಲ್ಲ. ಆದರೆ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ‘ನಕಲಿ ರಾಷ್ಟ್ರೀಯತೆ’ಯನ್ನಾಗಿ ಮಾಡಿಕೊಂಡಿರುವುದು ಬಿಜೆಪಿ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Uniform Civil Code Explainer: ಏಕರೂಪ ನಾಗರಿಕ ಸಂಹಿತೆ: ಏನು ಎತ್ತ? ವಿವಾದವೇಕೆ?

(Manmohan Singh questions Modi why always blame Jawaharlal Nehru)

Comments are closed.