ಲಖನೌ: ವಿಧಾನಸಭಾ ಚುನಾವಣೆ(Assembly Election) ಘೋಷಣೆಯಾಗಿರುವ ಉತ್ತರ ಪ್ರದೇಶ(Uttar Pradesh)ದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
(CM Yogi Adityanath)ರ ವಿರುದ್ಧ ಬಂಡೆದ್ದಿರುವ ಓರ್ವ ಸಚಿವ (Maurya) ಮತ್ತು ನಾಲ್ವರು ಶಾಸಕರು ಬಿಜೆಪಿಯ(BJP)ನ್ನು ತೊರೆದಿದ್ದಾರೆ. ಸಮಾಜವಾದಿ ಪಕ್ಷ (ಎಸ್‌ಪಿ) ಸೇರುವುದಾಗಿ ಹೇಳಿದ್ದಾರೆ. ಇದರಿಂದ ಮತ್ತೆ ಗೆದ್ದು ಅಧಿಕಾರ ಹಿಡಿಯಬೇಕೆಂದು ಹಂಬಲಿಸಿರುವ ಬಿಜೆಪಿಗೆ ಮೊದಲ ಹಂತದ ನಾಮಪತ್ರ ಸಲ್ಲಿಕೆಗೂ ಮುನ್ನವೇ ಆಘಾತ ಆಗಿದೆ.
ಹಿಂದುಳಿದ ವರ್ಗದ ಮುಖಂಡ, 5ನೇ ಬಾರಿಗೆ ಶಾಸಕರಾಗಿರುವ ಯೋಗಿ ಸಂಪುಟದ ಸದಸ್ಯ ಸ್ವಾಮಿ ಪ್ರಸಾದ್ ಮೌರ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಿಎಂ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. “ವಿಭಿನ್ನ ವಿಚಾರಧಾರೆ ಹೊರತಾಗಿಯೂ ಯೋಗಿ ಆದಿತ್ಯನಾಥರ ಸಂಪುಟದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿರುವೆ. ಆದರೆ ಸರ್ಕಾರ ದಲಿತರು, ಹಿಂದುಳಿದ ವರ್ಗ, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ತೀವ್ರ ದಬ್ಬಾಳಿಕೆ ಮಾಡುತ್ತಿದೆ. ಇದನ್ನು ಇನ್ನು ಸಹಿಸಲು ಆಗದು. ಹೀಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ” ಎಂದು ರಾಜ್ಯಪಾಲರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಮೌರ್ಯ ಕಾರಣ ನೀಡಿದ್ದಾರೆ. ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಅವರನ್ನು ಮೌರ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯರ ಪುತ್ರಿ ಸಂಮಿತ್ರ ಮೌರ್ಯ ಬದೌನ್ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದೆ. ಬಿಜೆಪಿಯ ಶಾಸಕರಾದ ರೋಶನ್ ಲಾಲ್ ವರ್ಮ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ಕೂಡ ರಾಜೀನಾಮೆ ಸಲ್ಲಿಸಿದ್ದು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.
ಒಬಿಸಿ ನಾಯಕರಿಗೆ ಅಖಿಲೇಶ್ ಗಾಳ:
ರಾಜ್ಯದಲ್ಲಿ ಒಬಿಸಿ ಜನಸಂಖ್ಯೆ ಸುಮಾರು ಶೇ. 35ರಷ್ಟಿದೆ. ಯಾದವೇತರ ಒಬಿಸಿಗಳನ್ನು ಸೆಳೆಯಲೆಂದೇ ಅಖಿಲೇಶ್ ಯಾದವ್ ಒಬಿಸಿ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ), ಜನವಾದಿ ಸಮಾಜವಾದಿ ಪಕ್ಷ (ಜೆಎಸ್ಪಿ), ಮಹಾನ್ ದಳ ಮತ್ತು ಇತರ ಸಣ್ಣಪುಟ್ಟ ಜಾತಿ ಆಧಾರಿತ ಪಕ್ಷಗಳ ಜತೆ ಮೈತ್ರಿಗೆ ಯತ್ನಿಸಿದ್ದಾರೆ.
ಎಸ್‌ಪಿ ಜತೆ ಎನ್‌ಸಿಪಿ ಮೈತ್ರಿ:
ಉತ್ತರ ಪ್ರದೇಶ ಚುನಾವಣೆಗೆ ನಾವು (ಎನ್‌ಸಿಪಿ) ಸಮಾಜವಾದಿ ಪಾರ್ಟಿ(ಎಸ್‌ಪಿ) ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಇಲ್ಲಿ 13 ಬಿಜೆಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಈ ಮಧ್ಯೆ, ಪಕ್ಷದ ನಾಯಕಿ, ಮಾಜಿ ಸಿಎಂ ಮಾಯಾವತಿ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಎಸ್ಪಿ ಮುಖಂಡ ಸತೀಶ್ ಚಂದ್ರ ಮಿಶ್ರಾ ಹೇಳಿದ್ದಾರೆ.
ಗೋವಾದ ಪಕ್ಷೇತರ ಶಾಸಕ ಗೌಡೆ ಬಿಜೆಪಿಗೆ ಸೇರ್ಪಡೆ:
ಗೋವಾದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಪಕ್ಷೇತರ ಶಾಸಕ ಗೋವಿಂದ್ ಗೌಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : Uttar Pradesh Election 2022 Opinion Poll: ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ವಿಟೋ ಸಮೀಕ್ಷೆ
(Maurya left the Yogi Cabinet(BJP) and may be join SP)