Monkeys snatch baby : ರೂಂಗೆ ನುಗ್ಗಿ ಮಗುವನ್ನು ಹೊತ್ತೊಯ್ದ ಕೋತಿಗಳು; ಎರಡು ತಿಂಗಳ ಮಗು ಬಲಿ

ಬಾಘಪತ್: ಉತ್ತರ ಪ್ರದೇಶದ ಬಾಪತ್‌ನಲ್ಲಿ (Uttar Pradesh) ಕೋತಿಗಳ ಕಾಟ ವಿಪರೀತವಾಗಿದೆ. ಈ ಬಗ್ಗೆ ಸ್ಥಳೀಯ ಮುನ್ಸಿಪಾಲ್ಟಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ಪರಿಣಾಮ ಮತ್ತು ಪಾಲಕರ ಅಜಾಗರೂಕತೆಯಿಂದಾಗಿ ಭಾನುವಾರ ಎರಡು ತಿಂಗಳ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಮನೆಯ ತಾರಸಿಯಲ್ಲಿದ್ದ ಕೊಠಡಿಯಲ್ಲಿ ಅಜ್ಜಿಯೊಂದಿಗೆ ಮಗು ಕೇಶವ್ ಕುಮಾರ್ ಮಲಗಿತ್ತು. ಆದರೆ, ರೂಮಿನ ಬಾಗಿಲು ಹಾಕಿರಲಿಲ್ಲ. ಅಷ್ಟರಲ್ಲಿ ಬಂದ ವಾನರರ ಹಿಂಡು ರೂಂಗೆ ನುಗ್ಗಿ ಮಲಗಿದ್ದ ಮಗುವನ್ನು ಬೊಂಬೆಯೊಂದೋ, ತಿನ್ನುವ ಪದಾರ್ಥವೆಂದೋ ತಿಳಿದು ಎತ್ತಿಕೊಂಡು ಹೋದವು. ಈ ಸಮಯದಲ್ಲಿ ಮಗು ಕೂಡ ರೋಧಿಸಲಿಲ್ಲ ಅಥವಾ ಗಾಢ ನಿದ್ರೆಯಲ್ಲಿದ್ದ ಅಜ್ಜಿಗೆ ಎಚ್ಚರ ಆಗಲಿಲ್ಲ. ಅತ್ತ ಮಂಗಗಳು (Monkeys snatch baby) ಮಗುವನ್ನು ಸಮೀಪದಲ್ಲಿದ್ದ ಕೆರೆಗೆ ಎಸೆದು ತಮ್ಮ ಪಾಡಿಗೆ ಮುಂದಿನ ದಾಳಿಗೆ ಹೊರಟುಹೋದವು.

ಇತ್ತ ನಿದ್ರೆಯಿಂದ ಎದ್ದ ಅಜ್ಜಿ, ಪಕ್ಕದಲ್ಲಿ ಮಲಗಿದ್ದ ಮೊಮ್ಮಗನನ್ನು ಕಾಣದೆ ಗಾಬರಿ ಬಿದ್ದಳು, ಮನೆಯವರನ್ನೆಲ್ಲಾ ಕರೆದಳು. ಕುಟುಂಬದವರು ಊರಲೆಲ್ಲ ಹುಡುಕಾಡಿದರೂ ಮಗು ಸಿಗಲಿಲ್ಲ. ಅಷ್ಟರಲ್ಲಿ ಮಗುವಿನ ಶವವೊಂದು ಕೆರೆಯಲ್ಲಿ ತೇಲುತ್ತಿರುವುದನ್ನು ನೋಡಿರುವುದಾಗಿ ಕೆಲವರು ಹೇಳಿದರು. ಎಲ್ಲರು ಕೆರೆಯ ಬಳಿ ಹೋಗಿ ನೋಡಿದಾಗ ಅದು ಕೇಶವ ಕುಮಾರ್ನ ದೇಹವಾಗಿತ್ತು. ಕುಟುಂಬದವರ ರೋಧನ ಮುಗಿಲು ಮುಟ್ಟಿತು.

ಕಪಿಗಳ ಉಪದ್ರವದಿಂದ ಉತ್ತರ ಪ್ರದೇಶದ ಬಾಘಪತ್ ಎಂಬಲ್ಲಿ ಎರಡು ತಿಂಗಳ ಹಸುಗೂಸು ಪ್ರಾಣ ಕಳೆದುಕೊಂಡಿದೆ. ಈ ಹಿಂದೆಯೂ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ್ದವು ಆಗ ಎಚ್ಚೆತ್ತ ಸಂಬಂಧಿಕರಿಂದಾಗಿ ಅದು ವಿಫಲವಾಗಿತ್ತು. ಕೋತಿಗಳ ಕಾಟದಿಂದ ಬೆಸ್ತು ಬಿದ್ದಿದ್ದರೂ ಈ ಕುಟುಂಬದವರು ಪಾಠ ಕಲಿಯದಿದ್ದದ್ದು ವಿಪರ್ಯಾಸ.

ನಾಯಿಗಳ ಮೇಲೆ ಕೋತಿಗಳ ಸೇಡು:
ತಿಂಗಳ ಹಿಂದೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್ನಲ್ಲಿ ನಾಯಿಗಳ ಮೇಲೆ ಮಂಗಗಳ ಸೇಡು ತೀರಿಸಿಕೊಂಡಿದ್ದ ಘಟನೆ ವರದಿ ಆಗಿತ್ತು.
ನಾಯಿಗಳು ಕೋತಿ ಮರಿಯನ್ನು ಕೊಂದವೆಂದು ಆಕ್ರೋಶಗೊಂಡ ಕೋತಿಗಳ ಹಿಂಡು ಊರಿಗೆ ನುಗ್ಗಿ ಸುಮಾರು 250 ನಾಯಿಗಳನ್ನು ಸಾಯಿಸಿ ಸೇಡು ತೀರಿಸಿಕೊಂಡಿದ್ದವು.
ಒಂದು ತಿಂಗಳಿಂದ ಮಂಗಗಳು ಊರಿಗೆ ನುಗ್ಗಿ ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಅವುಗಳನ್ನು ಕಟ್ಟಡದ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ ಬೀಳಿಸಿ ಸಾಯಿಸುತ್ತಿವೆ ಎಂದು ಸ್ಥಳೀಯರು ದೂರು ನೀಡಿದ್ದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಕೋತಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: Motorola Razr 5G : ಮತ್ತೆ ಲಾಂಚ್ ಆಗಲಿದೆ ಮೊಟೊರೋಲಾ ರೇಜರ್ 3: ಇದು ಮಡಚಬಹುದಾದ ಸ್ಮಾರ್ಟ್‌ಫೋನ್!

(Monkeys snatch baby and throw in water tank in Uttar Pradesh Baghpat)

Comments are closed.