ಕಾಂಗ್ರೆಸ್ ಮತ್ತು ಟ್ವಿಟರ್ ನಡುವಿನ ಸಮರ ಮುಂದುವರೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಲಾಕ್ ಆದ ಬೆನ್ನಲ್ಲೇ, ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ ಸೇರಿ ಐವರ ಟ್ವಿಟರ್ ಅಕೌಂಟ್ ನಿಷ್ಕ್ರಿಯಗೊಂಡಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜೆಯ್ ಮಾಕೆನ್, ಲೋಕಸಭೆಯ ಕಾಂಗ್ರೆಸ್ ಸಚೇತಕ ಮಾಣಿಕ್ಕಂ ಟಾಗೋರ್, ಅಸ್ಸಾಂ ಉಸ್ತುವಾರಿ ಜಿತೇಂದ್ರ್ ಸಿಂಗ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳು ಲಾಕ್ ಆಗಿವೆ.

ಟ್ವಿಟರ್ ಅಕೌಂಟ್ ಲಾಕ್ ಆಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್ ಗಳನ್ನು ಮಾಡಿದೆ. ಮಾತ್ರವಲ್ಲ ಟ್ವಿಟರ್ ಸಾಮಾಜಿಕ ಸಂಸ್ಥೆ ಕೇಂದ್ರ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

ದೇಶದಾದ್ಯಂತ 5 ಸಾವಿರ ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಸರ್ಕಾರ ಮತ್ತು ಟ್ವಿಟರ್ ನ ಈ ತಂತ್ರಗಳಿಗೆ ನಾವು ಅಂಜುವುದಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಅಧಿಕೃತ ಟ್ವಿಟರ್ ಅಕೌಂಟ್ ಗಳು ಲಾಕ್ ಆಗಿರುವ ಸ್ಕ್ರೀನ್ ಶಾಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ಅತ್ಯಾಚಾರಕ್ಕೊಳಗಾದ, ಅನ್ಯಾಯಕ್ಕೊಳಗಾದವರ ವಿರುದ್ಧ , ಶೋಷಿತರ ಪರವಾಗಿ ಧ್ವನಿ ಎತ್ತುವುದು ಅಪರಾಧವಾದರೇ ನಾವು ಆ ಅಪರಾಧ ಮಾಡುತ್ತೇವೆ ಎಂದಿದೆ.

ಕಳೆದ ವಾರ ಅತ್ಯಾಚಾರ ಸಂತ್ರಸ್ಥೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಾಲಕಿ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಪೋಷಕರೊಂದಿಗೆ ಪೋಟೋತೆಗೆದುಕೊಂಡು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದುಪೋಕ್ಸೋ ನಿಯಮಗಳ ಹಿನ್ನೆಲೆಯಲ್ಲಿ ಪೋಸ್ಟ್ ತೆರವುಗೊಳಿಸಿದ್ದ ಟ್ವಿಟರ್ ರಾಹುಲ್ ಖಾತೆ ಲಾಕ್ ಮಾಡಿತ್ತು.

ಇದನ್ನು ಖಂಡಿಸಿ ಹಲವು ನಾಯಕರು ಅದೇ ಪೋಟೋಹಂಚಿಕೊಂಡು ಟ್ವಿಟರ್ ನಲ್ಲಿ ಪ್ರತಿಭಟನೆ ಮುಂದುವರೆಸಿದ್ದರು. ಹೀಗಾಗಿ ಹಲವು ಕಾಂಗ್ರೆಸ್ ನಾಯಕರು ಟ್ವಿಟರ್ ಅಕೌಂಟ್ ರದ್ದಾಗಿದೆ ಎನ್ನಲಾಗಿದೆ.