Neeraj Chopra: ಕ್ರೀಡೆ, ಅಪೌಷ್ಟಿಕತೆ ಹಾಗೂ ಫಿಟ್‌ನೆಸ್ ಕುರಿತು ಜಾಗೃತಿ ಮೂಡಿಸಲಿರುವ ನೀರಜ್ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಡಿಸೆಂಬರ್ 4 ರಂದು ಅಹಮದಾಬಾದ್‌ನ ಸಂಸ್ಕಾರ್ ಧಾಮ ಶಾಲೆಗೆ ಭೇಟಿ ನೀಡಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಭಾರತದ ಕ್ರೀಡಾಪಟು ನೀರಜ್‌ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡು ಭಾರತೀಯರಿಗೆ ಹೆಮ್ಮೆಯ ಗರಿ ಮೂಡಿಸಿದ್ದರು. ಒಲಿಂಪಿಕ್ಸ್‌ ಕ್ರೀಡಾಕೂಟದ ಟ್ರ್ಯಾಕ್‌ ಹಾಗೂ ಫೀಲ್ಡ್‌ ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲಿಟ್‌ ಎಂಬ ದಾಖಲೆಯನ್ನು ನೀರಜ್‌ ಚೋಪ್ರಾ ತಮ್ಮ ಮುಡಿಗೇರಿಸಿಕೊಂಡಿದ್ದರು. ಇಂತಹ ಸಾಧಕ ಕ್ರೀಡಾಪಟುವಿನ ಮೂಲಕ ಜಾಗೃತಿ ಮೂಡಿಸುವ ಯೋಜನೆಯನ್ನು ಇದೀಗ ಹಮ್ಮಿಕೊಳ್ಲಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮತೋಲಿತ ಆಹಾರ, ಫಿಟ್‌ನೆಸ್ ಮತ್ತು ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯೊಂದನ್ನು ಡಿಸೆಂಬರ್ 4ರಂದು ನೀರಜ್ ಚೋಪ್ರಾ ಚಾಲನೆ ನೀಡಲಿದ್ದಾರೆ. ಆಗಸ್ಟ್ 16 ರಂದು ತಮ್ಮ ನಿವಾಸದಲ್ಲಿ ಟೋಕಿಯೊ ಒಲಿಂಪಿಯನ್‌ಗಳೊಂದಿಗಿನ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ 2023 ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ತಲಾ 75 ಶಾಲೆಗಳಿಗೆ ಭೇಟಿ ನೀಡಿ ಅಪೌಷ್ಟಿಕತೆಯ ವಿರುದ್ಧ ಜಾಗೃತಿ ಮೂಡಿಸುವಂತೆ ಕರೆ ನೀಡಿದ್ದರು. ಮತ್ತು ಶಾಲಾ ಮಕ್ಕಳೊಂದಿಗೆ ಕ್ರೀಡೆಯನ್ನು ಆಡುವಂತೆ ಭಾರತದ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳನ್ನು ಒತ್ತಾಯಿಸಿದ್ದರು.

ಬುಧವಾರ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೂ ತಮ್ಮ ಟ್ವೀಟ್‌ ಒಂದರಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಪ್ರಧಾನಮಂತ್ರಿಗಳ ಯೋಜನೆಯೊಂದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಶಿಕ್ಷಣ ಸಚಿವಾಲಯವು ಮುಂದಿನ ಎರಡು ವರ್ಷಗಳಲ್ಲಿ ಇದನ್ನು ‘ಮೀಟ್ ದಿ ಚಾಂಪಿಯನ್ಸ್’ ಎಂಬ ಹೆಸರಿನಲ್ಲಿ ಬಹುದೊಡ್ಡ ಕಾರ್ಯಕ್ರಮವಾಗಿ ನಡೆಸಲು ತಯಾರಿ ನಡೆಸುತ್ತಿದೆ. ಮುಂದಿನ ವರ್ಷ ಜನವರಿಯಿಂದ ಒಲಿಂಪಿಯನ್‌ಗಳ ಶಾಲಾ ಭೇಟಿಗಳು ಪ್ರಾರಂಭವಾಗಲಿವೆ. ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ‘ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ.

ನೀರಜ್ ಚೋಪ್ರಾರ ಬೆನ್ನುತಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ
ಈ ಮುನ್ನ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಸಾಧನೆಯ ಮೂಲಕ ಇತಿಹಾಸ ನಿರ್ಮಾಣವಾಗಿದೆ. ನೀರಜ್‌ ಚೋಪ್ರಾ ಇಂದು ಮಾಡಿರುವ ಈ ಸಾಧನೆಯನ್ನು ದೇಶ ಎಂದೆಂದಿಗೂ ನೆನಪಿಸಿಕೊಳ್ಳುವಂತಾಗಿದೆ. ನೀರಜ್‌ ಚೋಪ್ರಾ ಅಮೋಘ ಪ್ರದರ್ಶನ ನೀಡಿದ್ದಾರೆ. ಅತ್ಯಂತ ವೃತ್ತಿಪರತೆ ಹಾಗೂ ದಿಟ್ಟ ಮನಸ್ಸಿನಿಂದ ಆಟ ಪ್ರದರ್ಶಿಸಿ ಗೆಲುವು ಸಾಧಿಸಿದ್ದಾರೆ. ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ನೀರಜ್ ಚೊಪ್ರಾ ಪದಕ ಗೆದ್ದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ: Neeraj Chopra: ಸಾಧಕರಿಬ್ಬರ ಭೇಟಿ: ನೀರಜ್ ಚೋಪ್ರಾರನ್ನು ಭೇಟಿ ಮಾಡಿದ ಅಭಿನವ ಬಿಂದ್ರಾ

(Neeraj Chopra To Launch Prime Ministers Mission on December 4)

Comments are closed.