NEW CDS : ಮೂರು ಸೇನೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ

ನವದೆಹಲಿ : NEW CDS ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನ ಮೂರು ಸೇನೆಗಳ ಮುಖ್ಯಸ್ಥ (CDS) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಆಯ್ಕೆ ಮಾಡಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಆ ಮೂಲಕ ಜನರಲ್ ಬಿಪಿನ್ ರಾವತ್ ನಿಧನದ ಬಳಿಕ 9 ತಿಂಗಳು ಖಾಲಿ ಇದ್ದ ಸಿಡಿಎಸ್ ಸ್ಥಾನಕ್ಕೆ ನೂತನ ಮತ್ತು ಎರಡನೇ ಸಿಡಿಎಸ್ ಆಗಿ ಅನಿಲ್ ಚೌಹಾಣ್ ನೇಮಕವಾಗಿದೆ.

ಮೇ 18, 1961 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರಿಗೆ ಈಗ 61 ವರ್ಷ. ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, 1981 ರಲ್ಲಿ ಭಾರತೀಯ ಸೇನೆಯ 11ನೇ ಗೂರ್ಖಾ ರೈಫಲ್ಸ್‌ ರೆಜಿಮೆಂಟಿನಿಂದ ಸೇನಾ ಕರ್ತವ್ಯ ಪ್ರಾರಂಭಿಸಿದ್ರು. ಅನಿಲ್ ಚೌಹಾನ್ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಸೆಕ್ಟರ್ ನಲ್ಲಿ Northern Command ದಳಕ್ಕೆ ಮೇಜರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಈಶಾನ್ಯ ಕಾರ್ಪ್ಸ್‌ಗೆ ನಿಯುಕ್ತಿಗೊಂಡಿದ್ರು. ಬಳಿಕ 2019 ಸೆಪ್ಟೆಂಬರ್ ನಿಂದ ವೆಸ್ಟ್  ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆದ್ರು. ಮತ್ತು ಮೇ 2021 ರಲ್ಲಿ ಅವರು ಸೇವೆಯಿಂದ ನಿವೃತ್ತರಾದ್ರು. ಭಾರತೀಯ ಸೇನೆಯಿಂದ ನಿವೃತ್ತರಾದ ನಂತರವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದಾರೆ.

ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಅನಿಲ್ ಚೌಹಾಣ್ ಅವರು ಅನೇಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯದಲ್ಲಿ ನಡೆದ ಬಂಡಾಯ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ನಿವೃತ್ತ ಅಧಿಕಾರಿಯೊಬ್ಬರು ಸಿಡಿಎಸ್ ಹುದ್ದೆಗೆ ನೇಮಕವಾಗಿರುವುದರಿಂದ ನೇಮಕಾತಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸೆಪ್ಟೆಂಬರ್ 30ರಂದು ನೂತನ ಸಿಡಿಎಸ್ ಆಗಿ ಅನಿಲ್ ಚೌಹಾಣ್ ಅಧಿಕಾರ ಸ್ವೀಕರಿಸಲಿದ್ದಾರೆ. ಸೇನೆಯಲ್ಲಿನ ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಲಾಗಿದೆ.

ಭಾರತೀಯ ಸೇನೆಯಲ್ಲಿ ಸಮನ್ವಯ, ಸಹಕಾರ ಮತ್ತು ಒಗ್ಗಟ್ಟು ಸುಧಾರಿಸುವ ನಿಟ್ಟಿನಲ್ಲಿ ಸೃಷ್ಟಿಸಲಾದ ಸೇನಾ ಪಡೆಗಳ ಮುಖ್ಯಸ್ಥರ ಹುದ್ದೆಯು ಕಳೆದ ಹಲವು ತಿಂಗಳುಗಳಿಂದಲೂ ಖಾಲಿಯಾಗಿತ್ತು. ದೇಶದ ಮೊದಲ ಸಿಡಿಎಸ್, ಜನರಲ್ ಬಿಪಿನ್ ರಾವತ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾಗಿದ್ರು. ಬಳಿಕ ಸಿಡಿಎಸ್ ನೇಮಕಾತಿ ನಡೆದಿರಲಿಲ್ಲ. ಇದೀಗ ಈ ಹುದ್ದೆಗೆ ಕೇಂದ್ರ ಸರ್ಕಾರ ಮರುಜೀವ ನೀಡಿದೆ. ಸೇನಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಳ್ಳುವವರು ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಮೂರೂ ಸೇನೆಗಳ ವಿಷಯಗಳ ಕುರಿತು ರಕ್ಷಣಾ ಸಚಿವರಿಗೆ ಸಲಹೆ ಮತ್ತು ಮಾಹಿತಿ ನೀಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019 ರಲ್ಲಿ ಭಾರತದ ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಅಮೆರಿಕ ಮಾದರಿಯಲ್ಲಿ ಒಂದೇ ಮತ್ತು ಮರುಸಂಘಟಿಸುವ ಉದ್ದೇಶದೊಂದಿಗೆ ಜನರಲ್ ರಾವತ್ ಅವರನ್ನು CDS ಆಗಿ ಆಯ್ಕೆ ಮಾಡಿದ್ದರು. ಅವರು ಜನವರಿ 2020 ರಲ್ಲಿ ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ : ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ : ಡಿಕೆಶಿಗೆ ಮತ್ತೆ ಸಂಕಷ್ಟ

NEW CDS Lt General Anil Chauhan to take over as Chief of Defense Staff on September 30

Comments are closed.