ಚೆನ್ನೈ: surrogacy controversy: ಬಹಳ ದಿನಗಳಿಂದ ದೇಶಾದ್ಯಂತ ಚಚೆಗೆ ಗ್ರಾಸವಾಗಿದ್ದ ನಯನತಾರಾ ಬಾಡಿಗೆ ತಾಯ್ತನ ಪ್ರಕರಣಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ನಯನತಾರಾ- ವಿಘ್ನೇಶ್ ಶಿವನ್ ದಂಪತಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಗಳ ಪ್ರಕಾರವೇ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ತಮಿಳುನಾಡು ಸರ್ಕಾರ ರಚಿಸಿದ್ದ ತನಿಖಾ ಸಮಿತಿಯು ವರದಿ ನೀಡಿದೆ.
ಕಳೆದ ಜೂನ್ 9ರಂದು ನಯನತಾರಾ- ಶಿವನ್ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 4 ತಿಂಗಳಲ್ಲೇ ದಂಪತಿ ಅವಳಿ ಮಕ್ಕಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದರು. ಇದರಿಂದ ದೇಶದ ಜನ ಶಾಕ್ಗೆ ಒಳಗಾಗಿದ್ದರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗಿತ್ತು. ಅಷ್ಟರಲ್ಲೇ ಬಾಡಿಗೆ ತಾಯ್ತನದ ಮೂಲಕ ದಂಪತಿ ಮಕ್ಕಳನ್ನು ಪಡೆದಿದ್ದಾರೆ ಎಂದು ಸುದ್ದಿಯಾದರೂ ದಂಪತಿ ಬಾಡಿಗೆ ತಾಯ್ತನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಹೊಸ ವಿವಾದ ಸೃಷ್ಟಿಯಾಗಿತ್ತು. ಅಷ್ಟೇ ಅಲ್ಲದೇ ದಂಪತಿ ವಿರುದ್ಧ ದೂರು ಕೂಡಾ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತು. ತಮಿಳುನಾಡು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ತನಿಖೆ ಆರಂಭಿಸಿತ್ತು. ಸದ್ಯ ಪ್ರಕರಣಕ್ಕೆ ಬ್ರೇಕ್ ಬಿದ್ದಿದ್ದು, ಶಿವನ್- ನಯನತಾರಾ ದಂಪತಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ತಾರಾ ದಂಪತಿ ಕಾನೂನುಬದ್ಧವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಸಮಿತಿ ವರದಿ ಹೇಳಿದೆ. ಕಳೆದ 6 ವರ್ಷಗಳ ಹಿಂದೆಯೇ ದಂಪತಿ ರಿಜಿಸ್ಟ್ರಾರ್ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆಂಬ ಮಾಹಿತಿಯನ್ನು ಸಮಿತಿ ನೀಡಿದೆ. ಮಾತ್ರವಲ್ಲದೇ 2021ರಲ್ಲಿ ಬಾಡಿಗೆ ತಾಯ್ತನ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವ ಬಗ್ಗೆ ದಾಖಲೆಗಳನ್ನೂ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ತ್ರಿಸದಸ್ಯ ಸಮಿತಿ ಸರ್ಕಾರಕ್ಕೆ ವಿವರಣೆ ನೀಡಿದೆ.
ಕಳೆದ 2021ರ ನವೆಂಬರ್ ನಲ್ಲಿ ಬಾಡಿಗೆ ತಾಯಿಯು ದಂಪತಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. 2022ರ ಮಾರ್ಚ್ನಲ್ಲಿ ಭ್ರೂಣವನ್ನು ಬಾಡಿಗೆ ತಾಯಿಯಲ್ಲಿ ಇರಿಸಲಾಗಿದೆ. ಬಳಿಕ ಅಕ್ಟೋಬರ್ ನಲ್ಲಿ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಖಾಸಗಿ ಆಸ್ಪತ್ರೆ ವೈದ್ಯರು ಸೇರಿದಂತೆ ಹಲವರನ್ನು ತನಿಖಾ ತಂಡ ವಿಚಾರಣೆ ಒಳಪಡಿಸಿತ್ತು. ಬಾಡಿಗೆ ತಾಯಿಗೂ ಮದುವೆ ಆಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: KR Puram inspector death : ಕೆ.ಆರ್.ಪುರಂ ಇನ್ಸ್ ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವು
surrogacy controversy Nayanthara and Vignesh Shivan gets a clean chit from government