ಈ ಶಿಕ್ಷಕಿಗೆ ವರ್ಷಕ್ಕೆ 1 ಕೋಟಿ ರೂಪಾಯಿ ವೇತನ : ಒಂದೇ ಸಮಯಕ್ಕೆ 25 ಕಡೆ ಕೆಲಸ ಮಾಡ್ತಿದ್ದ ಚಾಲಾಕಿ ಶಿಕ್ಷಕಿ

0

ಲಕ್ನೋ : ಶಾಲಾ ಶಿಕ್ಷಕರ ವೇತನ ಎಷ್ಟಿರಬಹುದು. ಅಬ್ಬಬ್ಬಾ ಅಂದ್ರೆ ವರ್ಷಕ್ಕೆ 5 ಲಕ್ಷ ಇಲ್ಲಾ, ಇಲ್ಲಾ ಹೆಚ್ಚು ಅಂದ್ರೆ 10 ಲಕ್ಷ ರೂಪಾಯಿ ಇರಬಹುದು. ಆದರೆ ಇಲ್ಲೊಬ್ಬಳು ಶಿಕ್ಷಕಿ ವರ್ಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ವೇತನ ಪಡೆದಿದ್ದಾಳೆ. ಒಂದೇ ಕಾಲದಲ್ಲಿ ಬರೋಬ್ಬರಿ 25 ಶಾಲೆಗಳಲ್ಲಿ ಪಾಠ ಮಾಡಿದ್ದಾಳೆ. ಇದೇನಪ್ಪಾ ಅಂತಾ ಆಶ್ಚರ್ಯವಾಯ್ತಾ ಹಾಗಾದ್ರೆ ಈ ಸ್ಟೋರಿ ಓದಿ.

ಉತ್ತರ ಪ್ರದೇಶದ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅನಾಮಿಕ ಶುಕ್ಲಾ ಎಂಬಾಕೆಯೇ ಕೋಟಿ ರೂಪಾಯಿ ವೇತನ ಪಡೆದು ಸಿಕ್ಕಿಬಿದ್ದಿರುವ ಶಿಕ್ಷಕಿ. ಅನಾಮಿಕ ಶುಕ್ಲಾ ಹಲವು ವರ್ಷಗಳಿಂದಲೂ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ನಿರ್ವಹಿಸುತ್ತಿದ್ದಳು. ಆದರೆ ಅನಾಮಿಕ ಶುಕ್ಲಾ ಶಾಲಾ ಆಡಳಿತ ಮಂಡಳಿಯ ಕಣ್ತಪ್ಪಿಸಿ, ಶಿಕ್ಷಣ ಇಲಾಖೆಯ ವಿಶೇಷ ಯೋಜನೆಯಡಿಯಲ್ಲಿ ಅಂಬೇಡ್ಕರ್ ನಗರ, ಅಲಿಘಡ, ಪ್ರಯಾಗ್ ರಾಜ್, ಸಹರಾನ್ಪರ್, ಬಾಫ್ ಪಟ್ ಜಿಲ್ಲೆಗಳಲ್ಲಿನ ಸುಮಾರು 25 ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಳು. ಈ ಮೂಲಕ 13 ತಿಂಗಳ ಅವಧಿಯಲ್ಲಿ ಅನಾಮಿಕಾ ಶುಕ್ಲ ಬರೋಬ್ಬರಿ 1 ಕೋಟಿ ರೂಪಾಯಿ ವೇತನ ಪಡೆದು ಎಚ್ಚರಿಗೂ ಅಚ್ಚರಿಯನ್ನುಂಟು ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಪ್ರತೀ ತಿಂಗಳು ಶಿಕ್ಷಕರಿಗೆ 30,000 ರೂಪಾಯಿ ವೇತನವನ್ನು ನೀಡಲಾಗಿತ್ತು. ಅನಾಮಿಕ ಶುಕ್ಲಾ ಒಂದೇ ಸಮಯಕ್ಕೆ ಬರೋಬ್ಬರಿ 25 ಶಾಲೆಗಳಲ್ಲಿ ಕೆಲಸ ಮಾಡಿದ್ದಾಳೆ. ಅಲ್ಲದೇ ಎಲ್ಲಾ ಶಾಲೆಗಳಿಂದಲೂ ವೇತನ ಪಡೆದುಕೊಂಡಿದ್ದಾಳೆ. ಹೀಗಾಗಿ ಅನಾಮಿಕ ಶುಕ್ಲಾ ಕೇವಲ 13 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ವೇತನವನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು. ಆದರೆ ಅನಾಮಿಕ ಶುಕ್ಲಾ ವಿರುದ್ದ ಕೆಲವು ದೂರುಗಳು ಬರುತ್ತಿದ್ದಂತೆಯೇ ಶಿಕ್ಷಣ ಇಲಾಖೆಗೆ ಅನುಮಾನ ಮೂಡಿತ್ತು. ಹೀಗಾಗಿಯೇ ಶಾಲಾ ಶಿಕ್ಷಣ ಮಹಾನಿರ್ದೇಶ ವಿಜಯ್ ಕಿರಣ್ ಅನಾಮಿಕಾ ಶುಕ್ಲಾ ವಿರುದ್ದ ತನಿಖೆಗೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ಇಳಿದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಅನಾಮಿಕ ಶುಕ್ಲಾ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕೋಟ್ಯಾಂತರ ರೂಪಾಯಿ ಜಮೆ ಆಗಿರುವುದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಪ್ರೇರಣಾ ಪೋರ್ಟಲ್ ಆನ್ ಲೈನ್ ನಲ್ಲಿ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಆದರೂ ಕೂಡ ಅನಾಮಿಕಾ ಶುಕ್ಲಾ 25 ಸಂಸ್ಥೆಗಳಲ್ಲಿ ಆನ್ ಲೈನ್ ಹಾಜರಾತಿ ಹೇಗೆ ನಮೂದಿಸಿದ್ದಾಳೆ ಅನ್ನೋದು ಕುತೂಹಲ ಮೂಡಿಸಿದೆ. ಇನ್ನು ಎಲ್ಲಾ ಕಡೆಗಳಲ್ಲಿ ಒಂದೇ ಸಮಯಕ್ಕೆ ಶಾಲೆಗೆ ಹೇಗೆ ಹಾಜರಾಗಿದ್ದಾಳೆ. ಅಲ್ಲದೇ ಎಲ್ಲಾ ಆಡಳಿತ ಮಂಡಳಿಯೊಂದಿಗೆ ವ್ಯವಹರಿಸೋದಕ್ಕೆ ಹೇಗೆ ಸಾಧ್ಯವಾಯ್ತು ಅನ್ನುವ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಅವರು ಮಾತನಾಡಿ, ಮೈನ್ ಪುರಿ ಮೂಲದವರಾಗಿರುವ ಅನಾಮಿಕಾ ಶುಕ್ಲಾ, ಕೆಲಸ ಮಾಡಿದ ಶಾಲೆಗಳ ಶಿಕ್ಷಕರುಗಳ ಹೆಸರಿನ ಪಟ್ಟಿಯಲ್ಲಿ ಕಳೆದೊಂದು ವರ್ಷದಿಂದಲೂ ಇದ್ದಾರೆ. ಶಿಕ್ಷಕಿಯ ಬಗ್ಗೆ ಮಾರ್ಚ್ ತಿಂಗಳಿನಲ್ಲಿಯೇ ದೂರು ಬಂದಿತ್ತು. ಆನ್ ಲೈನ್ ಪೋರ್ಟಲ್ ಹಾಜರಾತಿಯ ಬಗ್ಗೆ ತನಿಖೆ ನಡೆಯುತ್ತಿದ್ದು, ಶಿಕ್ಷಕಿಯ ಕುರಿತು ಪ್ರಕರಣ ದಾಖಲಾಗಿದೆ. ಆರೋಪ ಸಾಭೀತಾದ್ರೆ ಶಿಕ್ಷಕಿಯ ವಿರುದ್ದ ಕಠಿಣಕ್ರಮಕೈಗೊಳ್ಳಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇದು ಹಿಡಿದ ಕೈಗನ್ನಡಿಯಾಗಿದೆ.

Leave A Reply

Your email address will not be published.