BIG NEWS : ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ : ಬಳ್ಳಾರಿ ವಾಸ್ತವ್ಯಕ್ಕೆ ಅನುಮತಿ ಕೊಟ್ಟ ಸುಪ್ರೀಂ ಕೋರ್ಟ್‌

ನವದೆಹಲಿ : ಗಣಿ ಹಗರಣದಲ್ಲಿ ಸಿಲುಕಿರುವ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್‌ ಅನುಮತಿಯನ್ನು ನೀಡಿದ್ದು, ಎಂಟು ವಾರಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಬಹುದು ಎಂದು ಆದೇಶಿಸಿದೆ. ಈ ಮೂಲಕ ಗಣಿಧಣಿಗೆ ಬಿಗ್‌ ರಿಲೀಪ್‌ ಸಿಕ್ಕಂತಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ. ಬಳ್ಳಾರಿ ಹಾಗೂ ಅನಂತಪುರಕ್ಕೆ ತೆರಳಲು ಅನುಮತಿಯನ್ನು ನೀಡಿದ್ದು, ಎಂಟು ವಾರಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಬಹುದು. ಆದರೆ ಬಳ್ಳಾರಿಗೆ ತೆರಳುವಾಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ತಿಳಿಸುವಂತೆಯೂ ಸೂಚಿಸಲಾಗಿದೆ.

ಬಳ್ಳಾರಿಯಲ್ಲಿ ಎಂಟು ವಾರಗಳ ಕಾಲ ತಂಗಲು ಅವಕಾಶವನ್ನು ಕಲ್ಪಿಸುವಂತೆ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿನೀತ್‌ ಶರಣ್‌ ನೇತೃತ್ವದ ಪೀಠ ಮಹತ್ವದ ಆದೇಶ ಹೊರಿಡಿಸಿದೆ. ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಅನುಮತಿ ನೀಡದಂತೆ ವಿರೋಧ ವ್ಯಕ್ತಪಡಿಸಿತ್ತು. ಬಳ್ಳಾರಿ ಹಾಗೂ ಅನಂತಪುರದಲ್ಲಿ ಜನಾರ್ದನ ರೆಡ್ಡಿ ಅತ್ಯಂತ ಪ್ರಭಾವವನ್ನು ಹೊಂದಿದ್ದಾರೆ. ಹೀಗಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆಯಿದೆ. ಹೀಗಾಗಿ ಅವಕಾಶವನ್ನು ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ ಜನಾರ್ದನ ರೆಡ್ಡಿ ಅವರು ಈ ಹಿಂದೆ ಹಲವು ಬಾರಿ ಬಳ್ಳಾರಿಗೆ ತೆರಳಿದ್ದಾರೆ. ಮಗಳ ಮದುವೆ, ಹಬ್ಬದ ಸಂದರ್ಭದಲ್ಲಿಯೂ ಭೇಟಿ ನೀಡಿದ್ದಾರೆ. ಗಣಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ನಂತರದಲ್ಲಿ ಜನಾರ್ದನ ರೆಡ್ಡಿ ಅವರು ಎಲ್ಲಿಯೂ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘನೆ ಮಾಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಯಾವುದೇ ವಿಚಾರಣೆಯನ್ನೂ ನಡೆಸಿಲ್ಲ. ಪ್ರಕರಣದ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಇಂತಹ ಸಂದರ್ಭದಲ್ಲಿ ಸಾಕ್ಷ್ಯ ನಾಶ ಮಾಡಲು ಸಾಧ್ಯವಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು.

ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಾಲಯ ಇದೀಗ ಜನಾರ್ದನ ರೆಡ್ಡಿಗೆ ಎರಡು ತಿಂಗಳುಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಎರಡು ತಿಂಗಳ ವಾಸ್ತವ್ಯದ ನಂತರ ಜನಾರ್ದನ ರೆಡ್ಡಿ ಮತ್ತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಬಳ್ಳಾರಿಗೆ ತೆರಳಲು ಜನಾರ್ಧನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ಇದನ್ನೂ ಓದಿ : ಸಚಿವೆಗೆ ಝೀರೋ ಟ್ರಾಫಿಕ್ ಪ್ರಕರಣ: ಸರ್ಕಾರ ಮತ್ತು ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೊಟೀಸ್!

Comments are closed.