ನವದೆಹಲಿ: ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ (Instagram) ಮೂಲಕ ಅತಿ ಹೆಚ್ಚು ಆದಾಯ ಗಳಿಸುವ ತಾರೆಯರ ಪೈಕಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ನಟಿ ಪ್ರಿಯಾಂಕಾ ಚೋಪ್ರಾ (Priyanka chopra) ಅವರನ್ನು ಹಿಂದಿಕ್ಕಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಾಯೋಜಿತ ಸಂದೇಶವೊಂದನ್ನು ಪ್ರಕಟಿಸಲು ವಿರಾಟ್ ಕೊಹ್ಲಿ 5 ಕೋಟಿ ರೂಪಾಯಿ ಚಾರ್ಜ್ ಪಡೆಯುತ್ತಿದ್ದಾರೆ. ಹೀಗಾಗಿ, 2021ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ತಾರೆಯರ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅತಿ ಹೆಚ್ಚು ಆದಾಯ ಪಡೆದವರ ಪಟ್ಟಿಯಲ್ಲಿ 27 ನೇ ಸ್ಥಾನದಲ್ಲಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸುವ ಪ್ರಾಯೋಜಿತ ಸಂದೇಶಕ್ಕೆ ಇವರು ಸುಮಾರು 3 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ.
ಉಳಿದಂತೆ, ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಪ್ರತಿ ಪ್ರಾಯೋಜಿತ ಪೋಸ್ಟಿಗೆ 11.91 ಒಂದು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಇನ್ನೊಬ್ಬ ಫುಟ್ಬಾಲ್ ಆಟಗಾರ ಲಯನೆಲ್ ಮೆಸ್ಸಿ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಪ್ರತಿಯೊಂದು ಪ್ರಾಯೋಜಿತ ಇನ್‌ಸ್ಟಾಗ್ರಾಂ ಪೋಸ್ಟ್ 8.68 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಅವರು ಸದ್ಯ ಇನ್‌ಸ್ಟಾಗ್ರಾಂನಲ್ಲಿ 17.7 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಪ್ರಿಯಾಂಕಾ ಚೋಪ್ರಾಗೆ 7.2 ಕೋಟಿ ಫಾಲೋವರ್ಸ್ ಇದ್ದಾರೆ. ಹಾಲಿವುಡ್, ಬಾಲಿವುಡ್, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಅನೇಕ ಕ್ಷೇತ್ರಗಳ ತಾರೆಯರು ಮತ್ತು ಅಭಿಮಾನಿಗಳ ನಡುವಣ ಪ್ರಮುಖ ಸಂಪರ್ಕ ಕೊಂಡಿಯಾಗಿ ಇತ್ತೀಚಿನ ವರ್ಷಗಳಲ್ಲಿ ಇನ್‌ಸ್ಟಾಗ್ರಾಂ ಹೆಚ್ಚಿನ ಬೆಳವಣಿಗೆ ಹೊಂದಿದೆ. ಅನೇಕ ಉದ್ಯಮಗಳು ಈ ತಾರೆಯರ ಮೂಲಕ ಪ್ರಚಾರದ ದಾರಿಯನ್ನು ಕಂಡುಕೊಂಡಿದೆ. ಈ ಮೂಲಕ ಉದ್ಯಮವಾಗಿಯೂ ಇನ್‌ಸ್ಟಾಗ್ರಾಂ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ.
(The Hopper Instagram Richlist 2021 has been released, Virat Kohli is at the 19th spot with his 177 million followers)