China’s discovers water on moon: ಚಂದಿರನಲ್ಲಿ ಜಲ ಮೂಲ ಪತ್ತೆ ಮಾಡಿದ ಚೀನಾದ ಚಾಂಗ್ಯಿ ನೌಕೆ

ಬೀಜಿಂಗ್: ಚಂದ್ರಾನ್ವೇಷಣೆ(Lunar Probe)ಯಲ್ಲಿ ತೊಡಗಿದ್ದ ಚೀನಾ(China)ದ ಚಾಂಗ್ಯಿ-5(Change-5) ಗಗನನೌಕೆ ಚಂದ್ರ ಮೇಲ್ಮೆನಲ್ಲಿ ನೀರಿನ ಸೆಲೆ ಇದ್ದಿದ್ದಕ್ಕೆ ಪುರಾವೆಯನ್ನು ತಂದಿದೆ. ಇದು ಚಂದ್ರನಲ್ಲಿ ನೀರು ಇದ್ದ ಬಗ್ಗೆ ದೊರೆತ ಹೊಸ ಸಾಕ್ಷ್ಯವಾಗಿದೆ. ಸೌರವ್ಯೂಹದ ಅನ್ಯಗ್ರಹಗಳಲ್ಲಿ ನೀರಿನ ಆಕರಗಳನ್ನು ಹುಡುಕುವ ಮಾನವನ ಶೋಧ ಬಹು ಹಿಂದಿನಿಂದಲೂ ನಡೆಯುತ್ತಿದೆ. ಇದರಿಂದ ಅನ್ಯ ಗ್ರಹಗಳಲ್ಲಿ ಜೀವಗಳು (Aliens) ಇವೆ ಎಂದು ತಿಳಿಯುವುದು ಮೊದಲ ಉದ್ದೇಶವಾದರೆ, ನೀರು ಇದ್ದರೆ ಅಲ್ಲಿಯೂ ವಸಹಾತುಗಳನ್ನು ಸ್ಥಾಪಿಸಬಹುದು ಎಂಬ ಹಪಹಪಿ ಇನ್ನೊಂದು.

ಈ ಮೂಲಕ ಅನ್ಯಗ್ರಹ ಪ್ರವಾಸೋದ್ಯಮವನ್ನು ನಡೆಸುವ ಕುಬೇರರ ಐಡಿಯಾಗಳಿಗೇನೂ ಕೊರತೆ ಇಲ್ಲ. ಈ ರೀತಿಯ ಶೋಧದಲ್ಲಿ ಮೊದಲು ಕಾಣುವ ಗ್ರಹವೇ ಚಂದ್ರ, ಚಂದ್ರ, ಭುವಿಗೆ ಸಮೀಪ ಇರುವ ಗ್ರಹ ಮತ್ತು ಈಗಾಗಲೇ ಇಲ್ಲಿಗೆ ಮಾನವ ಪಾದರ್ಪಣೆ ಮಾಡಿಯಾಗಿದೆ. ಚಂದ್ರನನ್ನು ಬಿಟ್ಟರೆ ಹತ್ತಿರವಿರುವ ಇನ್ನೊಂದು ಗ್ರಹ ಮಂಗಳ. ಇವೆರಡರಲ್ಲೇ ವಿಜ್ಞಾನಿಗಳು ಜಲ ಮೂಲವನ್ನು ಹುಡುಕುತ್ತಿದ್ದಾರೆ.

ಇಂತಿಪ್ಪ ಚಂದ್ರನ ಅನ್ವೇಷಣೆಗೆ ಚೀನಾದ ಚಾಂಗ್ಯಿ- 5 ಗಗನನೌಕೆ 2020ರ ಕಡೆಯ ಚರಣದಲ್ಲಿ ಹೋಗಿಬಂದಿದೆ. ಅದು ಹೊತ್ತು ತಂದಿರುವ ಮಣ್ಣು ಮತ್ತು ಬಂಡೆಗಳ ಮಾದರಿ ಅಲ್ಲಿ ನೀರಿದ್ದ ಕುರುಹನ್ನು ಚೀನಾದ ವಿಜ್ಞಾನ ಅಕಾಡೆಮಿ (ಸಿಎಎಸ್) ವಿಶ್ಲೇಷಿಸಿದೆ.

2020ರ ನವೆಂಬರ್ 23ರಂದು ಉಡಾವಣೆಯಾದ ಚಾಂಗ್ಯಿ-5 ನೌಕೆಯು ಚಂದ್ರನ ಮಧ್ಯಮ ಮಟ್ಟದ ಎತ್ತರದ ಪ್ರದೇಶದ ಅಗ್ನಿಶಿಲೆಯ ಮೇಲೆ ಡಿಸೆಂಬರ್ 1ರಂದು ಇಳಿದಿತ್ತು. ಡಿಸೆಂಬರ್ 16ರಂದು ಭೂಮಿಗೆ ಹಿಂದಿರುಗಿತ್ತು. ತಾನಿಳಿದಿದ್ದ ಜಾಗದಲ್ಲಿ ಮಣ್ಣು ಮತ್ತು ಬಂಡೆಗಳ ಮಿಶ್ರಣವಿದ್ದ 1,731 ಗ್ರಾಂ ಸ್ಯಾಂಪಲ್ ಅನ್ನು ತಂದಿತ್ತು. ಮಣ್ಣಿನಲ್ಲಿ 120 ಪಿಪಿಎಂಗಳು (ಪ್ರತಿ ದಶಲಕ್ಷ ಕಣಗಳು) ಅಂದರೆ ಪ್ರತಿ ಟನ್‌ಗೆ 120 ಗ್ರಾಂನಷ್ಟು ನೀರಿನ ಅಂಶ ಹಾಗೂ ವೆಸಿಕ್ಯುಲರ್ ಒಳಗೊಂಡ ಬಂಡೆಗಳಲ್ಲಿ 180 ಪಿಪಿಎಂಗಳು ಕಂಡು ಬಂದಿವೆ. ಇವು ಭೂಮಿಯ ಮೇಲಿನ ಬಂಡೆಗಳಿಗಿಂತ ಹೆಚ್ಚು ಅವೆಯಾಗಿವೆ ಎಂದು ಸಿಎಎಸ್ ತಿಳಿಸಿದೆ.

ಚಂದ್ರನಲ್ಲಿನ ನೀರು ಆವಿರ್ಭವಿಸಿದ್ದಕ್ಕೆ ಸೌರ ಮಾರುತಗಳು ಕಾರಣ. ಈ ಮಾರುತಗಳು ಹೊತ್ತು ತರುವ ಜಲಜನಕದ ಕಣಗಳಿಂದ ಆರ್ದ್ರತೆ ಘನೀಕರಿಸಿದೆ. ಮಣ್ಣಿಗಿಂತ ಬಂಡೆಗಳಲ್ಲಿ 60 ಪಿಪಿಎಂ ಹೆಚ್ಚಿರುವುದಕ್ಕೆ ಚಂದ್ರನಲ್ಲಿ ವ್ಯುತ್ಪತ್ತಿಯಾದ ನೀರೂ ಕಾರಣ ಆಗಿರಬಹುದು, ಚಂದ್ರನಲ್ಲಿದ್ದ ನೀರಿನ ಸೆಲೆಗಳು ಕ್ರಮೇಣ ಒಣಗಿರಬಹುದು ಎಂದು ಸಿಎಎಸ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ವರದಿ ಪೀರ್-ರಿವ್ಯೂಡ್ ಜರ್ನಲ್ ಸೈನ್ಸ್ನಲ್ಲಿ ಪ್ರಕಟವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:
How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?

(China’s Chang’e lunar-5 probe descovers first on-site evidence of water on moon’s surface)

Comments are closed.