Dhiren Krishna Shastri : ಈತ ಹೊಸ ದೇವಮಾನವ! ಧೀರೇಂದ್ರ ಕೃಷ್ಣ ಶಾಸ್ತ್ರಿಯ ಲೀಲೆಗಳೇ ಈಗ ಟ್ರೆಂಡ್!

ಆಗಾಗ ಸುದ್ದಿಯಾಗುತ್ತಲೇ ಇರುವ ದೇವಮಾನವರ ಸಾಲಿಗೆ ಹೊಸ ಹೆಸರೊಂದು ಭಾರೀ ಸದ್ದಿನೊಂದಿಗೆ ಸೇರ್ಪಡೆಯಾಗಿದೆ. ಅದೂ ಹಾಗೀಗಲ್ಲ, ವಿಶ್ವದಾದ್ಯಂತ ಟ್ರೆಂಡ್ ಕ್ರಿಯೇಟ್ ಮಾಡಿ ಧಿರೇಂದ್ರ ಕೃಷ್ಣ ಶಾಸ್ತ್ರಿ ಎಂಬ ಸ್ವಯಂಘೋಷಿತ ದೇವಮಾನವ (God Man) ಇದೀಗ ವಿಚಿತ್ರ ಚಮತ್ಕಾರಗಳ ಮೂಲಕ ಒಮ್ಮಿಂದೊಮ್ಮೆ ಖ್ಯಾತರಾಗುತ್ತಿದ್ದಾರೆ. ಇವರು ಮತ್ಯಾರೂ ಅಲ್ಲ, ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ದೇವಾಲಯದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhiren Krishna Shastri)!

ಹೌದು, ಬಾಗೇಶ್ವರ್ ಧಾಮ ಸರ್ಕಾರ್ ಎಂದೂ ತಮ್ಮ ಅನುಯಾಯಿಗಳಿಂದ ಕರೆಸಿಕೊಳ್ಳುವ ಇವರೇ ಹೊಸ ಸ್ವಯಂಘೋಷಿತ ದೇವಮಾನವ. ಈತ ಕೇವಲ 26 ವರ್ಷದ ತರುಣ! ನಿಮ್ಮ‌ ಮನಸ್ಸಲ್ಲಿ ಏನಿದೆ ಅಂತ ಚಿಟಿಕೆ ಹೊಡೆಯುವಷ್ಟರಲ್ಲಿ ಹೇಳುವುದು ನಮ್ಮ ‘ದೇವರ’ ಶಕ್ತಿ ಎಂದೇ ಧಿರೇಂದ್ರ ಕೃಷ್ಣ ಶಾಸ್ತ್ರಿಯವರ ಭಕ್ತರ ಮಾತು. ಈಗ ನಡೆದ ಘಟನೆಯೊಂದು ಈ ಮಾತಿನ ಮೇಲಿನ ನಂಬಿಕೆ ಸುಳ್ಳಾಗಿಸಿದೆ, ಆದರೂ ಈ ಸ್ವಯಂಘೋಷಿತ ದೇವಮಾನವನ ಹೆಸರು ಜಗತ್ತಿನೆಲ್ಲೆಡೆ ತಲುಪುವಂತೆ ಮಾಡಿದೆ.

ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದ್ಭುತ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಈ ಸ್ವಯಂಘೋಷಿತ ದೇವಮಾನವರಿಗೆ ಆಹ್ವಾನ ಬಂದಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಹಾಜರಾಗದೇ ಪಲಾಯನ ಮಾಡಿದ ಆರೋಪವೇ ಅವರನ್ನು ಈ ಮಟ್ಟಿಗೆ ಫೇಮಸ್ ಮಾಡಿದೆ. ಹಳೆಯ ವಿಡಿಯೋಗಳು ವೈರಲ್ ಆಗುವಂತೆ ಚಲಾವಣೆಗೆ ತಂದಿದೆ.

ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದು ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಪವಾಡಗಳನ್ನು ಸಾಬೀತು ಮಾಡಿದ್ರೆ 30 ಲಕ್ಷ ಬಹುಮಾನ ನೀಡೋದಾಗಿಯೂ ಘೋಷಣೆ ಮಾಡಿತ್ತು. ನಾಗ್ಪುರದಲ್ಲಿ ಆಯೋಜಿಸಿದ್ದ ರಾಮಕಥಾ ಸತ್ಸಂಗದಲ್ಲಿ ಪವಾಡವನ್ನು ಪ್ರದರ್ಶಿಸಲು ಸವಾಲು ಹಾಕಿತ್ತು. ಆದರೆ ಈ ಸ್ವಯಂಘೋಷಿತ ದೇವಮಾನವ ಕಾರ್ಯಕ್ರಮಕ್ಕೆ ಬರಲೇ ಇಲ್ಲ! ಈಗ ಪವಾಡ ಬಯಲು ಕಾರ್ಯಕ್ರಮ ಹಮ್ಮಿಕೊಂಡಿದ್ದ ಮೂಢನಂಬಿಕೆ ವಿರೋಧಿ ಸಂಘಟನೆ ಸ್ವಯಂ ಘೋಷಿತ ದೇವಮಾನವ ಧಿರೇಂದ್ರ ಕೃಷ್ಣ ಶಾಸ್ತ್ರಿ ಮೇಲೆ ಸವಾಲನ್ನು ಸ್ವೀಕರಿಸದೇ ಓಡಿಹೋದ ಆರೋಪ ಮಾಡಿದೆ. ಅಲ್ಲದೇ FIR ದಾಖಲಿಸುವಂತೆಯೂ ಆಗ್ರಹಿಸಿದೆ.

ಇದನ್ನೂ ಓದಿ : Besan Hair Mask: ಚಳಿಗಾಲದ ತಲೆಹೊಟ್ಟು ಸಮಸ್ಯೆಗೆ, ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ನಲ್ಲಿದೆ ಪರಿಹಾರ

ಜುಲೈ 4, 1996 ರಂದು ಮಧ್ಯ ಪ್ರದೇಶದ ಛತ್ತರ್‌ಪುರದ ಬಳಿಯ ಗದಗಂಜ್ ಗ್ರಾಮದಲ್ಲಿ ಜನಿಸಿದ ಧೀರೇಂದ್ರ ಕೃಷ್ಣ ಶಾಸ್ತ್ರಿ ಫ್ಯಾಮಿಲಿ ಇನ್ನೂ ಅಲ್ಲೇ ವಾಸವಾಗಿದೆ. ಅಲ್ಲೇ ಪಕ್ಕ ಪುರಾತನವಾದ ಬಾಗೇಶ್ವರ ಧಾಮ್ ದೇವಾಲಯವಿದೆ. ಇಲ್ಲಿ ಅವರ ಪೂರ್ವಿಕರ ಮನೆಯೂ ಇದೆ.

ಭಾಗೇಶ್ವರ ಧಾಮದಲ್ಲಿರುವ ಹನುಮಂತನ ದೇಗುಲದಿಂದಲೇ ಧಿರೇಂದ್ರ ಕೃಷ್ಣ ಶಾಸ್ತ್ರಿ ಪವಾಡ ಪುರುಷರಾಗಿ ಹೊರಹೊಮ್ಮಿರೋದಾಗಿ ಭಕ್ತರು ಹೇಳ್ತಾರೆ. ಅಲ್ಲದೇ, ಈ ಹಿಂದೆ ಅಸ್ಪೃಶ್ಯತೆ ಆಚರಿಸೋಕೆ ಕುಮ್ಮಕ್ಕು ನೀಡಿದ ಆರೋಪವೂ ಈ ದೇವಮಾನವ ಹೊಂದಿದ್ದಾರೆ. ಕೆಲವು ಬಿಜೆಪಿ‌ ನಾಯಕರೂ ಈ ಸ್ವಯಂಘೋಷಿತ ದೇವಮಾನವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ರು ಅನ್ನೋದು ಈಗ ಮುನ್ನೆಲೆಗೆ ಬಂದಿದೆ.

ಒಟ್ಟಾರೆ ಧಿರೇಂದ್ರ ಕೃಷ್ಣ ಶಾಸ್ತ್ರಿ ಎಂಬ ಈ ಸ್ವಯಂಘೋಷಿತ ದೇವಮಾನವ ನಿಜಕ್ಕೂ ಪವಾಡ ಮಾಡ್ತಾರಾ? ಏನಿವರ ಲೀಲೆ? ಅಷ್ಟೊಂದು ಜನರು ಇವರ ಭಕ್ತರಾಗಿರೋದೇಕೆ ಅನ್ನೋದೇ ಈಗ ನಡೆಯುತ್ತಿರೋ ಹಾಟ್ ಟಾಪಿಕ್ ಚರ್ಚೆ. ಸಾಕ್ಷಾತ್ ಹನುಮಂತನನ್ನೇ ಸಾಕ್ಷಾತ್ಕರಿಸಿಕೊಂಡಿರೋದಾಗಿ ಹೇಳ್ಕೊಂಡಿರೋ ಈ ದೇವಮಾನವನ ಭವಿಷ್ಯ ಏನಾಗುತ್ತೆ ಅನ್ನೋದು ಸದ್ಯದ ಮಿಲಿಯನದ ಡಾಲರ್ ಪ್ರಶ್ನೆ.

ಇದನ್ನೂ ಓದಿ : Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ ನೋಡಿ

(who is dhiren krishna shastri new god man pravachan controversy latest news)

Comments are closed.