ವಸತಿ ಶಾಲೆಯ ಮಕ್ಕಳಿಗೂ ಮನೆ ಸಮೀಪದ ಕೇಂದ್ರದಲ್ಲೇ ಪರೀಕ್ಷೆ : ಮೇ 29ರೊಳಗೆ SSLCಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ

0

ಬೆಂಗಳೂರು : ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳ ಆಯ್ಕೆಯ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ ಕೊನೆಗೂ ಪ್ರೌಢಶಾಲಾ ಪರೀಕ್ಷಾ ಮಂಡಳಿ ತೆರೆ ಎಳೆದಿದೆ. ವಲಸೆ ಕಾರ್ಮಿಕರ ಮಕ್ಕಳ ಜೊತೆಗೆ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ತಮ್ಮ ಮನೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಮೇ 29ರ ಒಳಗಾಗಿ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಪ್ರೌಢಶಾಲಾ ಪರೀಕ್ಷಾ ಮಂಡಳಿ ವಲಸೆ ಕಾರ್ಮಿಕರ ಮಕ್ಕಳು ಹಾಗೂ ಕ್ವಾರಂಟೈನ್ ಗೆ ಒಳಪಟ್ಟಿರುವ ಶಾಲೆ, ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಮನೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಬಹುದು. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ನಡೆಸುತ್ತಿರುವ ಶಾಲೆಗಳಲ್ಲಿಯೇ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದ್ದರು.

ಈ ಕುರಿತು NEWS NEXT “SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಪರೀಕ್ಷಾ ಕೇಂದ್ರದ ಆಯ್ಕೆಯಲ್ಲಿ ಮತ್ತೆ ಗೊಂದಲ ಸೃಷ್ಟಿಸಿದ ಪರೀಕ್ಷಾ ಮಂಡಳಿ !” ತಲೆ ಬರಹದಲ್ಲಿ ವಿಸ್ತ್ರತ ವರದಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಪ್ರೌಢಶಾಲಾ ಪರೀಕ್ಷಾ ಮಂಡಳಿ ಎಚ್ಚೆತ್ತುಕೊಂಡಿದ್ದು, ವಸತಿ ಶಾಲೆಯ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ತಾವು ಸದ್ಯ ವಾಸ ಮಾಡುತ್ತಿರುವ ಮನೆಯ ಹತ್ತಿರದ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಬದಲಿಸಿಕೊಳ್ಳಬಹುದು. ಪರೀಕ್ಷಾ ಕೇಂದ್ರ ಬದಲಾವಣೆಗೆ ಮೇ 29ರವರೆಗೆ ಅವಕಾಶ ನೀಡಲಾಗಿದೆ. ಬದಲಾವಣೆ ಮಾಡಿಕೊಳ್ಳದಿದ್ದರೆ ಮೂಲ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡರೂ ಹಳೆಯ ಪರೀಕ್ಷಾ ನೋಂದಣಿ ಸಂಖ್ಯೆ ಇರಲಿದೆ. ಮೊದಲಿಗೆ ತಾವು ಓದಿದ ಶಾಲಾ ಮುಖ್ಯ ಶಿಕ್ಷಕರ ಬಳಿ ತೆರಳಿ ಕೇಂದ್ರ ಬದಲಾವಣೆ ಬಗ್ಗೆ ಮಾಹಿತಿ ನೀಡಬೇಕು. ಶಾಲಾ ಮುಖ್ಯಸ್ಥರು ಬದಲಾವಣೆ ಮಾಡಿದ ಕೇಂದ್ರದ ಮಾಹಿತಿಯನ್ನ ಎಸ್‍ಎಸ್‍ಎಲ್‍ಸಿ ಬೋರ್ಡಿಗೆ ಮಾಹಿತಿ ಕೊಡಬೇಕಾಗುತ್ತದೆ.

ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಪರೀಕ್ಷೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈಗ ವಿದ್ಯಾರ್ಥಿಗಳು ಇರುವ ತಾಲೂಕು ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಂದು ಬಾರಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂದರೆ ಮತ್ತೆ ಬದಲಾವಣೆ ಅವಕಾಶ ಇಲ್ಲ ಎಂದು ಹೇಳಿದೆ. ಇನ್ನು ಹೊಸ ಕೇಂದ್ರ ಬದಲಾವಣೆ ನಂತರ ಹಳೆ ಕೇಂದ್ರದಲ್ಲಿ ಬರೆಯಲು ಅವಕಾಶ ಇರೋದಿಲ್ಲ.

ಹೊಸ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಕೂಡ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್‌ನಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಪರೀಕ್ಷಾ ಕೇಂದ್ರದ ಬದಲಾವಣೆಯನ್ನು ಮಾಡಿಕೊಳ್ಳಲು ಯಾವುದೇ ಪರೀಕ್ಷಾ ಕೇಂದ್ರಗಳನ್ನು ಪಾವತಿಸುವಂತಿಲ್ಲ. ಹೊಸ ಪರೀಕ್ಷಾ ಕೇಂದ್ರದ ಬದಲಾವಣೆಯ ನಂತರ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಲಿಯುತ್ತಿರುವ ಶಾಲಾ ಮುಖ್ಯಸ್ಥರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪ್ರೌಢಶಾಲಾ ಪರೀಕ್ಷಾ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.

Leave A Reply

Your email address will not be published.