ಬೆಂಗಳೂರು : ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗೋ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ತಮಗೆ ಸಿಎಂ ಸ್ಥಾನಕ್ಕೆ ಆಫರ್ ನೀಡಿದ್ದರು. ಅದಕ್ಕಾಗಿ 2500 ಕೋಟಿ ಕೇಳಿದ್ದರು ಎಂಬ ಹೇಳಿಕೆ ನೀಡಿದ್ದ ಯತ್ನಾಳ್ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದರೇ ಇನ್ನೊಂದೆಡೆ ಯತ್ನಾಳ ವಿರುದ್ಧ ಕಾಂಗ್ರೆಸ್ ನಿಯೋಗ ಎಸಿಬಿಗೆ ದೂರು ನೀಡಿದೆ.
ಸದಾ ತಮ್ಮ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸೋ ಬಸನಗೌಡ ಪಾಟೀಲ್ ಯತ್ನಾಳ ಮೊನ್ನೆ ಮೊನ್ನೆಯಷ್ಟೇ ಮೇ 10 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದಿದ್ದರು. ಇದರ ಬೆನ್ನಲ್ಲೇ ಸಿಎಂ ಸ್ಥಾನದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದ ಮಾಜಿಸಚಿವ ಯತ್ನಾಳ ನನಗೆ ದೆಹಲಿಯಲ್ಲಿ ಸಿಎಂ ಸ್ಥಾನಕ್ಕೆ ಆಫರ್ ಬಂದಿತ್ತು. 2500 ಕೋಟಿ ಕೊಟ್ಟರೇ ಸಿಎಂ ಸ್ಥಾನ ಕೊಡೋದಾಗಿ ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಿಜೆಪಿ ಪಕ್ಷದಲ್ಲೇ ತೀವ್ರ ಚರ್ಚೆಗೆ ಗುರಿಯಾಗಿದ್ದು, ಸ್ವತಃ ಸಿಎಂ ಬೊಮ್ಮಾಯಿ ಕೂಡ ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರಂತೆ.
ಯತ್ನಾಳ್ ಈ ರೀತಿ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಬೊಮ್ಮಾಯಿ ಬೇಸರಿಸಿಕೊಳ್ಳುತ್ತಿರುವಾಗಲೇ, ಕಾಂಗ್ರೆಸ್ ನಾಯಕರು ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕೈ ಪಡೆ ಎಸಿಬಿಗೆ ದೂರು ನೀಡಿದೆ. ಬೆಂಗಳೂರಿನ ಖನಿಜಭವನದಲ್ಲಿರುವ ಎಸಿಬಿ ಕಚೇರಿಗೆ ತೆರಳಿದ ಕಾಂಗ್ರೆಸ್ ನಿಯೋಗ ಯತ್ನಾಳ್, ಸಿಎಂ ಸೀಟಿಗೆ 2500 ಕೋಟಿ ಕೇಳಿದ್ದರು. ದೆಹಲಿಯಲ್ಲಿರುವ ಕೆಲವರು ನನ್ನನ್ನ ಕೇಳಿದ್ದರು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಹೀಗಾಗಿ ಬಿಜೆಪಿ ನಾಯಕರು ಬಿಜೆಪಿ ಪಕ್ಷದಲ್ಲಿ ಹಣದ ವ್ಯವಹಾರ ನಡೆದಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಹೀಗಾಗಿ, ಬಿಜೆಪಿ ಶಾಸಕ ಯತ್ನಾಳ್ ಬಹಿರಂಗವಾಗಿ ಹೇಳಿರೋದನ್ನೇ ದಾಖಲೆಯಾಗಿಟ್ಟುಕೊಂಡು ಶಾಸಕರ ವಿರುದ್ಧ ಎಫ್ ಐಆರ್ ದಾಖಲಿಸಬೇಕು. ಅಲ್ಲದೇ ಕೂಡಲೇ ಅವರನ್ನ ವಿಚಾರಗೊಳಪಡಿಸಬೇಕು ಎಂದು ಎಸಿಬಿಗೆ ಕಾಂಗ್ರೆಸ್ ಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ. ಕಾಂಗ್ರೆಸ್ ನಾಯಕ ಮನೋಹರ ನೇತೃತ್ವದಲ್ಲಿ ಕಾಂಗ್ರೆಸ್ ನ ಹಲವು ನಾಯಕರು ಈ ನಿಯೋಗದಲ್ಲಿ ಪಾಲ್ಗೊಂಡಿದ್ದರು. ಯತ್ನಾಳ್ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು ಈಗ ಸಿಎಂ ಸ್ಥಾನದ ಹೇಳಿಕೆ ಬಳಿಕ ಮತ್ತಷ್ಟು ಮುಜುಗರ ಎದುರಿಸುವ ಸ್ಥಿತಿ ಬಿಜೆಪಿಯದ್ದಾಗಿದೆ.
ಇದನ್ನೂ ಓದಿ : ಸಂಪುಟ ಸರ್ಕಸ್ ಗೆ ಕ್ಲೈಮ್ಯಾಕ್ಸ್ : ಮೇ 11 ರಂದು ನಿರ್ಧಾರವಾಗಲಿದೆ ಭವಿಷ್ಯ
ಇದನ್ನೂ ಓದಿ : ಪೆಟ್ರೋಲ್ ಸುರಿದು ಸ್ವಂತ ಅಜ್ಜಿಯನ್ನೇ ಸುಟ್ಟು ಕೊಂದ ಮೊಮ್ಮಕ್ಕಳು ಅಂದರ್
ಇದನ್ನೂ ಓದಿ : 2500 ಕೋಟಿ ರೂ.ಗಳಿಗೆ ಸಿಎಂ ಆಫರ್ ನೀಡಿದ್ರು : ಹೊಸ ಬಾಂಬ್ ಸಿಡಿಸಿದ ಯತ್ನಾಳ್
2500 crores statement to Basangouda Patil Yatnal, Congress complains Against BJP MLA