ಸೋಮವಾರ, ಏಪ್ರಿಲ್ 28, 2025
Homekarnatakaವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

ವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

- Advertisement -

ಕಾಪು : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲೀಗ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲೀಗ (Kapu Assembly constituency) ರಾಜಕೀಯ ಚಟುವಟಿಕೆಗಳಿಗೆ ಗರಿಗೆದರಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿನ ಮುಖಂಡರು ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ. ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಕೂಡ ಐದು ಹೆಸರುಗಳು ಬಹುತೇಕ ಅಂತಿಮ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಹಾಲಿ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ (vinay kumar sorake), ಪ್ರಮೋದ್ ಮಧ್ವರಾಜ್, ರಾಜಶೇಖರ ಕೋಟ್ಯಾನ್ ಹಾಗೂ ಸುರೇಶ್ ಗುರ್ಮೆ (Gurme Suresh Shetty) ಅವರ ಹೆಸರುಗಳಿವೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ (Lalalji R. Medon ) ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದ್ದು, ಬಿಜೆಪಿಯಿಂದ ಮೊಗವೀರ ಮುಖಂಡ ಪ್ರಮೋದ್ ಮಧ್ವರಾಜ್ (Pramod Madhwaraj) ಹಾಗೂ ಕಾಂಗ್ರೆಸ್ ನಿಂದ ಬಿಲ್ಲವ ಮುಖಂಡ ರಾಜಶೇಖರ ಕೋಟ್ಯಾನ್ (Rajshekar Kotian) ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಂದು ಬಾರಿ ಸೋಲನ್ನು ಕಂಡಿದ್ದ ಶಾಸಕ ಲಾಲಾಜಿ ಆರ್. ಮೆಂಡನ್ ಕಳೆದ ಚುನಾವಣೆಯಲ್ಲಿ ಮತ್ತೆ ಗೆದ್ದುಬಂದಿದ್ದರು. ರಾಜ್ಯದಲ್ಲಿ ಸದ್ಯ ಬಿಜೆಪಿ ಸರಕಾರವೇ ಆಡಳಿತದಲ್ಲಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನೂ ನಡೆಸಿದ್ದಾರೆ. ಸರಕಾರದಿಂದ ಸಾಕಷ್ಟು ಅನುದಾನವನ್ನು ತರುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸರಳ, ಸಜ್ಜನಿಕೆಯ ಶಾಸಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕ್ಷೇತ್ರದ ಜನರ ಜೊತೆಗೆ ಕೂಡ ಉತ್ತಮ ಒಡನಾಟವನ್ನೂ ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲುವನ್ನು ಕಂಡಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಟಿಕೆಟ್ ಕೊಡಬಾರದು ಅನ್ನೋ ಲೆಕ್ಕಾಚಾರ ಸದ್ಯ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಖುದ್ದು ಕೆಲವು ಬಿಜೆಪಿ ಮುಖಂಡರೇ ಈ ಬಾರಿ ಹೊಸಬರಿಗೆ ಟಿಕೆಟ್ ನೀಡಬೇಕು ಅನ್ನೋ ಬೇಡಿಕೆಯನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಕಾಪು ಕ್ಷೇತ್ರಕ್ಕೆ ಈ ಬಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕು ಅನ್ನೋ ಬೇಡಿಕೆ ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಕಳೆದೊಂದು ದಶಕಗಳಿಂದಲೂ ಗುರ್ಮೆ ಸುರೇಶ್ ಶೆಟ್ಟಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಜೊತೆಯಲ್ಲಿಯೂ ಸುರೇಶ್ ಶೆಟ್ಟಿ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಜೊತೆಗೆ ಬಂಟ ಸಮುದಾಯದ ಮುಖಂಡರು ಕೂಡ ಬಿಜೆಪಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ಕ್ಷೇತ್ರಗಳಲ್ಲಿ ಸದ್ಯ ಬಂಟ ಸಮುದಾಯ ಶಾಸಕರಿದ್ದಾರೆ. ಇದೇ ಕಾರಣಕ್ಕೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ.

ಲಾಲಾಜಿ ಆರ್. ಮೆಂಡನ್ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರ ಜೊತೆಯಲ್ಲಿ ಮೊಗವೀರ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಹೆಸರು ಬಲವಾಗಿಯೇ ಕೇಳಿಬರುತ್ತಿದೆ. ಸದ್ಯ ಕಾಪು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲಾಲಾಜಿ ಆರ್. ಮೆಂಡನ್ ಕೂಡ ಮೊಗವೀರ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಒಂದೊಮ್ಮೆ ಲಾಲಾಜಿ ಆರ್.ಮೆಂಡನ್ ಅವರಿಗೆ ಟಿಕೆಟ್ ನೀಡದೇ ಇದ್ರೆ ಅದೇ ಸಮುದಾಯದ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಪ್ರಮೋದ್ ಮಧ್ವರಾಜ್ ಸಮಾಜ ಸೇವೆಯ ಜೊತೆಗೆ ಸಚಿವರಾಗಿದ್ದ ವೇಳೆಯಲ್ಲಿಯೂ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಇನ್ನೊಂದೆಡೆಯಲ್ಲಿ ಕಾಪು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಯ ಸಲುವಾಗಿಯೇ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಕರೆತರಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಕಾರಣಕ್ಕೆ ಒಂದೊಮ್ಮೆ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿದ್ರೆ ಬಿಜೆಪಿ ಮತಗಳ ಜೊತೆಗೆ ಕಾಂಗ್ರೆಸ್ ನ ಕೆಲವು ಮತಗಳನ್ನು ಸೆಳೆಯ ಬಹುದು ಅನ್ನೋ ಲೆಕ್ಕಾಚಾರವೂ ಇದೆ. ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರು ಕೂಡ ಪ್ರಮೋದ್ ಮಧ್ವರಾಜ್ ಅವರನ್ನು ಕಾಪು ಕ್ಷೇತ್ರದಿಂದ ಕಣಕ್ಕೆ ಇಳಿಸಲು ಉತ್ಸುಕರಾದಂತೆ ಕಾಣುತ್ತಿದೆ. ಹಿಂದುಳಿದ ವರ್ಗದ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಅವರು ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿ, ಸಮುದಾಯದ ಮುಖಂಡರನ್ನು ಪಕ್ಷದತ್ತ ಸೆಳೆಯುವ ಕಾರ್ಯವನ್ನು ಮಾಡಿದ್ದಾರೆ. ಇನ್ನೊಂದೆಡೆಯಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಪ್ರಮೋದ್ ಅವರಿಗೆ ಟಿಕೆಟ್ ನೀಡಲು ಮನಸ್ಸು ಮಾಡಿದಂತಿದೆ. ಇದನ್ನೂ ಓದಿ : ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಇಬ್ಬರ ಹೆಸರುಗಳು ಕ್ಷೇತ್ರದಲ್ಲಿ ಬಾರೀ ಸದ್ದು ಮಾಡುತ್ತಿದೆ. ಒಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತೊಂದು ಬಿಲ್ಲವ ಮುಖಂಡ ರಾಜಶೇಖರ ಕೋಟ್ಯಾನ್. ಪುತ್ತೂರು ಮೂಲದ ವಿನಯ ಕುಮಾರ್ ಸೊರಕೆ ಅವರು ಒಂದು ಬಾರಿ ಕಾಪು ಕ್ಷೇತ್ರದ ಶಾಸಕರಾಗಿದ್ರೆ, ಮತ್ತೊಂದು ಬಾರಿ ಲಾಲಾಜಿ ಆರ್. ಮೆಂಡನ್ ಅವರ ವಿರುದ್ದ ಸೋಲನ್ನು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷ ಹತ್ತು ಸಾವಿರಕ್ಕೂ ಅಧಿಕ ಅಂತರದಲ್ಲಿ ಸೋಲು ಕಂಡವರಿಗೆ ಈ ಬಾರಿ ಟಿಕೆಟ್ ನೀಡದಿರಲು ತೀರ್ಮಾನಿಸಿದೆ. ಕಳೆದ ಚುನಾವಣೆ ಯಲ್ಲಿ ಸೊರಕೆ ಹನ್ನೊಂದು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಅಲ್ಲದೇ ತೀರಾ ಕಡಿಮೆ ಮತಗಳ ಅಂತರದಲ್ಲಿ ಅವರು ಶಾಸಕರಾಗಿ ಆಯ್ಕೆ ಆಗಿದ್ದರು. ಉಡುಪಿ ಜಿಲ್ಲೆಯ ಸಂಸದರಾಗಿ ಕೆಲಸ ಮಾಡಿದ್ದರೂ ಕೂಡ ಕ್ಷೇತ್ರಕ್ಕೆ ಸೊರಕೆ ಹೊರಗಿನವರು ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಸಚಿವರಾಗಿ ಕಾಫು ಕ್ಷೇತ್ರದಲ್ಲಿ ಸೊರಕೆ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಗೂ ಪಕ್ಷದ ಆಂತರಿಕ ಸಮೀಕ್ಷೆಯ ಪ್ರಕಾರ ಸೊರಕೆ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್ ಕುಮಾರ್ ರೈ

ಕಾಫು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಲವಾಗಿ ಕೇಳಿಬರುತ್ತಿರುವ ಹೆಸರು ರಾಜಶೇಖರ ಕೋಟ್ಯಾನ್. ಸಿನಿಮಾ ನಟರಾಗಿ, ಬಿಲ್ಲವ ಸಮುದಾಯದ ಮುಖಂಡರಾಗಿರುವ ರಾಜಶೇಖರ ಕೋಟ್ಯಾನ್ ಇತ್ತೀಚಿಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಪಡುಬಿದ್ರಿ ಮೂಲದ ರಾಜಶೇಖರ ಕೋಟ್ಯಾನ್ ಅವರಿಗೆ ಈ ಬಾರಿ ಕಾಪು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬಂದಿದೆ. ಬಿಲ್ಲವ ಸಮುದಾಯದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿರುವ ರಾಜ ಶೇಖರ್ ಕೋಟ್ಯಾನ್ ಅವರಿಗೆ ಈ ಬಾರಿ ಟಿಕೆಟ್ ನೀಡಿದ್ರೆ, ಬಿಲ್ಲವ ಮತಗಳನ್ನು ಕಾಂಗ್ರೆಸ್ ಸೆಳೆಯುವುದರ ಜೊತೆಗೆ ಅಲ್ಪಸಂಖ್ಯಾತ ಮತಗಳು ಕೂಡ ಪಕ್ಷಕ್ಕೆ ಬರಲಿದೆ ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ. ಮುಂದಿನ ಚುನಾವಣೆಗೆ ಈಗಾಗಲೇ ರಾಜಶೇಖರ ಕೋಟ್ಯಾನ್ ಅವರು ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಜೊತೆಗೆ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿಯೂ ರಾಜಶೇಖರ ಕೋಟ್ಯಾನ್ ಹೆಸರು ಮುಂಚೂಣಿಯಲ್ಲಿದೆ.

ಒಟ್ಟಿನಲ್ಲಿ ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ(Kapu Assembly constituency) ಜಿದ್ದಾಜಿದ್ದಿನ ಹೋರಾಟ ಏರ್ಪಡುವ ಸಾಧ್ಯತೆಯಿದೆ. ಸದ್ಯದ ಸ್ಥಿತಿಯಲ್ಲಿ ಲಾಲಾಜಿ ಮೆಂಡನ್ ಹಾಗೂ ವಿಜಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದ್ದು, ಪ್ರಮೋದ್ ಮಧ್ವರಾಜ್ (Pramod Madhwaraj) ಹಾಗೂ ರಾಜಶೇಖರ ಕೋಟ್ಯಾನ್ (Rajshekar Kotian) ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಅಂತಿಮ ಹಂತದಲ್ಲಿ ಲಾಲಾಜಿ ಆರ್. ಮೆಂಡನ್ ಅವರೇ ಕಣಕ್ಕೆ ಇಳಿದರೂ ಅಚ್ಚರಿಯಿಲ್ಲ.‌

ಯಾರಾಗ್ತಾರೆ MLA 2023 ಜನತಾ ತೀರ್ಪು

ಕಾಪು ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಮುಂದಿನ ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ. ಯಾವ ಪಕ್ಷದ ಕಡೆಗೆ ಮತದಾರರ ಒಲವಿದೆ. ಈ ಹಿನ್ನೆಲೆಯಲ್ಲೀಗ News Next ಮಹಾ ಸಮೀಕ್ಷೆಯನ್ನು ಕೈಗೊಂಡಿದೆ. ಕೆಳಗಿನ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ ನಿಮ್ಮ ನೆಚ್ಚಿನ ಅಭ್ಯರ್ಥಿಗೆ VOTE ಮಾಡಬಹುದಾಗಿದೆ.

https://youtu.be/g0a5AHkZjAQ

Assembly Elections 2023: Kapu Assembly constituency Exit Poll Pramod Madhwaraj vs Rajshekar Kotian

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular