ಶ್ರೀರಾಮ ಪರಿವರ್ತನೆಯ ಪ್ರತಿಪಾದಕ : ಪ್ರಧಾನಿ ನರೇಂದ್ರ ಮೋದಿ

0

ಅಯೋಧ್ಯೆ : ಶ್ರೀರಾಮಚಂದ್ರ ಪರಿವರ್ತನೆಯ ಪ್ರತಿಪಾದಕ, ಶ್ರೀರಾಮನು ವಿರೋಧದ ಬದಲಾಗಿ ನಮಗೆ ಬೋಧ, ಶೋಧಗಳ ದಾರಿ ತೋರಿಸಿದ್ದಾನೆ. ಆತನ ಜೀವನಾದರ್ಶಗಳನ್ನು ಪಾಲಿಸುತ್ತ ನಾವೆಲ್ಲರೂ ಸ್ವಾವಲಂಬಿ ಭಾರತವನ್ನು ನಿರ್ಮಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.

ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಯುಗಯುಗಗಳ ತನಕ ಈ ರಾಮಮಂದಿರ ಜಗತ್ತಿಗೆ ಮಾನವತೆಯ ಮಾರ್ಗದರ್ಶನ ಮಾಡಲಿದೆ. ಸದ್ಯ ನಾವೆಲ್ಲರೂ ಮುನ್ನಡೆಯಬೇಕು. ಭಾರತವೂ ಮುನ್ನಡೆಯ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮಾಡಬೇಕು. ಎಲ್ಲರಿಗೂ ಆರೋಗ್ಯ ನೀಡುವಂತೆ ಶ್ರೀರಾಮಚಂದ್ರ, ಸೀತಾದೇವಿಯರಲ್ಲಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ಅನೇಕತೆಯಲ್ಲಿ ಏಕತೆಯನ್ನು ತಂದುಕೊಡಬಲ್ಲವನು ರಾಮ. ಪ್ರತಿಯೊಂದು ಸಮುದಾಯ, ದೇಶದವರೂ ರಾಮ. ರಾಮಾಯಣದ ಜತೆಗೆ ನಂಟು ಹೊಂದಿದ್ದಾರೆ. ಭಾರತದಲ್ಲೇ ಒಂದೊಂದು ರಾಜ್ಯದಲ್ಲಿ ಒಂದೊಂದು ರಾಮಾಯಣದ ಕಥೆ ಸಿಗುತ್ತದೆ. ವಿದೇಶಗಳಲ್ಲೂ ರಾಮಕಥಾ ವಿವರಣೆ, ರಾಮಾಯಣದ ವಿವರಣೆ ಸಿಗುತ್ತದೆ. ನಮ್ಮ ಅರಿವು, ಜೀವನಾದರ್ಶಗಳು ಜಗತ್ತಿನಾದ್ಯಂತ ಹೇಗೆ ಪಸರಿಸಿದೆ ನೋಡಿ. ಅಯೋಧ್ಯಾ ಕೇಂದ್ರ ಸ್ಥಾನವಾಗಿ ಎಲ್ಲೆಲ್ಲಿ ರಾಮ, ರಾಮಾಯಣ ಪಸರಿಸಿಕೊಂಡಿದೆಯೋ ಅವೆಲ್ಲವನ್ನೂ ಜೋಡಿಸುವ ಸರ್ಕೀಟ್ ರಚನೆಯಾಗಲಿದೆ ಎಂದಿದ್ದಾರೆ.

ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ಲಕ್ಷಾಂತರ ರಾಮಭಕ್ತರ ಐದು ದಶಕಗಳ ಕನಸು ನನಸಾಗಿದೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 6 ವರ್ಷಗಳ ಕಾಲ ಅಯೋಧ್ಯೆಗೆ ನರೇಂದ್ರ ಮೋದಿ ಅವರು ಭೇಟಿಕೊಟ್ಟಿರಲಿಲ್ಲ. ಇದೀಗ ತಮ್ಮ ಶಪತವನ್ನು ಈಡೇರಿಸಿಕೊಂಡಿದ್ದು, ಕೊಟ್ಟ ಭರವಸೆಯಂತೆಯೇ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ರಾಮಮಂದಿರದ ಶಿಲಾನ್ಯಾಸಕ್ಕೂ ಮೊದಲು ದೇವ ವೃಕ್ಷವೆಂದು ಕರೆಯಲ್ಪಡುವ ಕೃಷ್ಣಪ್ರಿಯ ಪಾರಿಜಾತ ಗಿಡವೊಂದನ್ನು ನೆಡುವ ಮೂಲಕ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ದೆಹಲಿಯಿಂದ ಅಯೋಧ್ಯೆಗೆ ಆಗಮಿಸುವ ಮೊದಲು ನರೇಂದ್ರ ಮೋದಿ ಅವರು ಹನುಮಾನ್ ಗಢಿ ದೇವಾಲಯಕ್ಕೆ ಭೇಟಿ ನೀಡಿದ್ರು, ನಂತರ ರಾಮಲಲ್ಲಾ ದೇಗುಲದಲ್ಲಿ ದರ್ಶನ ಪಡೆದಿದ್ದರು.

ಇದೊಂದು ಐತಿಹಾಸಿಕ ದಿನ. ದೀರ್ಘಾವಧಿಗೆ ಈ ದಿನ ಸ್ಮರಣೀಯವಾಗಿ ಉಳಿಯಲಿದೆ. ರಾಮಮಂದಿರ ನಿರ್ಮಾಣವಾಗುವುದೆಂಬ ವಿಶ್ವಾಸವಿದೆ. ಅದೇ ರೀತಿ ಭಾರತದಲ್ಲಿ ರಾಮರಾಜ್ಯವೂ ಸ್ಥಾಪನೆಯಾಗಲಿದೆ ಎಂದ ಯೋಗ ಗುರು ಬಾಬಾ ರಾಮದೇವ್ ಅವರು ಹೇಳಿದ್ದಾರೆ.

ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರವೇ ಶಿಲಾನ್ಯಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಗಲ್ಲು ಹಾಕಲಾಗಿದ್ದು, ಈಗಾಗಲೇ ರಾಮಮಂದಿರದ ನೀಲ ನಕಾಶೆಯನ್ನು ಅನಾವರಣಗೊಳಿಸಲಾಗಿದೆ. ರಾಮಮಂದಿರ ಶಿಲಾನ್ಯಾಸದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಸಂಖ್ಯಾತ ರಾಮಭಕ್ತರು ಅಯೋಧ್ಯೆಗೆ ಆಗಮಿಸಿದ್ದರು.

Leave A Reply

Your email address will not be published.