Basavaraj Horatti BJP: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ತಾರಾ? ಓದಿ ನಿಮ್ಮ ಅಭಿಪ್ರಾಯ ತಿಳಿಸಿ

ರಾಜಕೀಯದಲ್ಲಿ ಯಾವುದೂ ಆಗುವುದಿಲ್ಲ ಎಂಬುದಿಲ್ಲ. ಏನು ಬೇಕಾದರು ಆಗಬಹುದು, ಆಗದೆಯೂ ಇರಬಹುದು. ಇಂತಹುದೇ ಒಂದು ಘಟನೆಯೊಂದು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಸದ್ದಿಲ್ಲದೇ ನಡೆಯುತ್ತಿರುವ ಸುಳಿವು ಮೂಡುತ್ತಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಪಕ್ಷಕ್ಕೆ (Basavaraj Horatti BJP) ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಮತ್ತೆ ಕಾವೇರಿದೆ. ಇದಕ್ಕೆ ಕಾರಣ ಬಿಜೆಪಿ ಮುಖಂಡ, ಕೇಂದ್ರ ಸಚಿವ ಸಚಿವ ಪ್ರಹ್ಲಾದ್ ಜೋಶಿ. ಇವತ್ತು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಇಬ್ಬರು ಹೆಸರನ್ನು ಅಂತಿಮಗೊಳಿಸಲಾಗಿದೆ. ತೀರ್ಮಾನ ಹೈಕಮಾಂಡ್ ಮಾಡುತ್ತದೆ. ನಂತರ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಬಸವರಾಜ ಹೊರಟ್ಟಿ ಬಿಜೆಪಿ ಪಕ್ಷ ಸೇರುತ್ತಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಜೋಶಿ ಅವರು, ಈಗ ಯಾವ ಪಕ್ಷ ಸೇರುತ್ತಾರೆ, ಯಾವ ಪಕ್ಷ ಸೇರುವುದಿಲ್ಲ ಎನ್ನುವುದು ಪ್ರಸ್ತುತ ಅಲ್ಲ. ಆದರೆ, ಬಿಜೆಪಿ ಪಕ್ಷದಿಂದ ಪರಿಷತ್ ಚುನಾವಣೆಗೆ ಒಬ್ಬ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ. ಅದು ಹೊರಟ್ಟಿ ಅವರೇ ಆಗಿರಬಹುದು, ಮತ್ತೊಬ್ಬರು ಆಗಿರಬಹುದು. ಒಟ್ಟಾರೆ, ಅಭ್ಯರ್ಥಿ ಇದ್ದೇ ಇರುತ್ತಾರೆ ಎಂದು ಹೇಳುವ ಮೂಲಕ ಹೊರಟ್ಟಿಯ ಬಿಜೆಪಿ ಸೇರು ಸೂಚನೆ ನೀಡಿದ್ದಾರೆ.

ಹೊಸ ಸುದ್ದಿಯಲ್ಲ
ಹೊರಟ್ಟಿ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹೊಸತಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಅವರನ್ನು ಬಿಜೆಪಿ ಸೇರುವಂತೆ ಮುಕ್ತ ಆಹ್ವಾನ ನೀಡಿದ್ದರು. ಆದರೆ, ಹೊರಟ್ಟಿ ಅದನ್ನು ನಯವಾಗಿ ತಿರಸ್ಕರಿಸಿದ್ದರು. ನಾಲ್ಕೈದು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಸವರಾಜಹೊರಟ್ಟಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡಿಸಿದ್ದರು. ಆ ಸಂದರ್ಭದಲ್ಲಿ ಹೊರಟ್ಟಿ, ಮುಂದಿನ ವಿಧಾನಪರಿಷತ್ ಚುನಾವಣೆಗೆ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರಂತೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ, ನಿಮಗೆ ಹೇಗೆ ಅನಿಸುತ್ತದೆಯೋ ಆ ತೀರ್ಮಾನ ಕೈಗೊಳ್ಳಿ ಎಂದಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಬಿಜೆಪಿ ಲೆಕ್ಕಾಚಾರ
ಸತತ 7 ಬಾರಿ ಶಿಕ್ಷಕ ಕ್ಷೇತ್ರದಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಯವರು ಹಿರಿಯ ಲಿಂಗಾಯತ ಮುಖಂಡರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭವಿಷ್ಯದಲ್ಲಿ ಬಿಜೆಪಿ ಪಕ್ಷ ಲಂಗರು ಹಾಕಲು ಹೊರಟ್ಟಿಯವರನ್ನು ಬಳಸಿಕೊಳ್ಳಲು ಈಗಲೇ ಪಕ್ಷಕ್ಕೆ ಸೇರ್ಪಡೆ ಮಾಡುವ ಲೆಕ್ಕಾಚಾರ ಹಾಕಿದೆ. ಇದಕ್ಕಿಂತ ಮುಖ್ಯವಾಗಿ, ಹೊರಟ್ಟಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ಜೆಡಿಎಸ್ ಗೆ ಹೊಡೆತ ಬೀಳುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ಬಿಜೆಪಿ ಮುಂಬರುವ ಚುನಾವಣೆಗೆ ಜೆಡಿಎಸ್ ಅನ್ನು ಕುಗ್ಗಿಸುವ ತಂತ್ರವೂ ಹೊರಟ್ಟಿಯವರು ಸೇರ್ಪಡೆಯ ಹಿಂದಿದೆ ಎನ್ನಲಾಗುತ್ತಿದೆ.

ಒಂದು ಮೂಲದ ಪ್ರಕಾರ, ಜೆಡಿಎಸ್ ಪಕ್ಷದ ಆಂತರಿಕ ವಿದ್ಯಾಮಾನಗಳಿಂದ ಬೇಸತ್ತು ಹೊರಟ್ಟಿ ಅವರೇ ಖುದ್ದು ಬಿಜೆಪಿಗೆ ಸೇರುವುದಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತದೆ. ಮೇ ತಿಂಗಳ ಹೊತ್ತಿಗೆ ಹೊರಟ್ಟಿ ಅವರ ಅವಧಿ ಮುಗಿಯಲಿದೆ. ಬಿಜೆಪಿ ಪಕ್ಷದಿಂದ ಪರಿಷತ್ ಚುನಾವಣೆಗೆ ನಿಮ್ಮ ಹೆಸರು ಅಖೈರು ಗೊಂಡಿದೆಯಂತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಹೊರಟ್ಟಿ, ನನ್ನ ಹೆಸರು ಹೇಳಿದವರಿಗೆ ವಂದನೆಗಳು. ನಾನು ಈತನಕ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೇ ತಿಂಗಳಲ್ಲಿ ಎಲ್ಲವನ್ನೂ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Fashion Show Photo Gallery: ಬೆಂಗಳೂರಲ್ಲಿ ಟಾಕ್ ಆಫ್ ದಿ ಟೌನ್- 2022 ಫ್ಯಾಷನ್ ವೀಕ್: 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್

(Basavaraj Horatti BJP here is the new development in Karnataka Politics)

Comments are closed.