Siddaramaiah DK Shivakumar CM race : “ನಾನು ಸಿಎಂ.. ನಾನು ಸಿಎಂ..” ಸಿದ್ದು-ಡಿಕೆಶಿ ಸಿಎಂ ರೇಸ್ ಹಿಂದಿದೆ ಯಾರಿಗೂ ಅರ್ಥವಾಗದ ನಿಗೂಢ ದಾಳ !

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿದ್ರೆ, ಮುಖ್ಯಮಂತ್ರಿ ಯಾರಾಗ್ಬೇಕು ಎಂಬ ಬಗ್ಗೆ ಈಗ್ಲೇ ಚರ್ಚೆ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಸಿಕ್ಕರೆ ಮತ್ತೊಂದು ಆಟ ಆಡಲು ರೆಡಿಯಾಗಿ ನಿಂತಿದ್ರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಸಿಎಂ ರೇಸ್”ನಲ್ಲಿ(Siddaramaiah DK Shivakumar CM race ) ನಾನೂ ಇದ್ದೇನೆ ಎಂಬ ಸಂದೇಶವನ್ನು ಪದೇ ಪದೇ ರವಾನಿಸುತ್ತಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಕೆಶಿ, ಮುಖ್ಯಮಂತ್ರಿಯಾಗುವ ತಮ್ಮ ಮನದಿಂಗಿತವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ.

“ಎಸ್.ಎಂ ಕೃಷ್ಣ ಅವರ ನಂತರ ರಾಜ್ಯದ ಅತ್ಯುನ್ನತ ಹುದ್ದೆಗೇರುವ ಅವಕಾಶ ಒದಗಿ ಬಂದಿದೆ. ನಮ್ಮ ಸಮುದಾಯದವರು ಈ ಅವಕಾಶವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಅವಕಾಶವನ್ನು ಕೊಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು”.

  • ಡಿ.ಕೆ ಶಿವಕುಮಾರ್, ಕೆ.ಪಿ.ಸಿ.ಸಿ ಅಧ್ಯಕ್ಷ

ಹೀಗಂತ ಕೆಂಪೇಗೌಡ ಜನ್ಮದಿನಾಚರಣೆ ಸಮಾರಂಭದ ವೇದಿಕೆಯಲ್ಲೇ ಹೇಳಿದ್ದ ಡಿ.ಕೆ ಶಿವಕುಮಾರ್ ಆ ಮೂಲಕ ಒಕ್ಕಲಿಗ ಸಮುದಾಯ ಮುಂದಿನ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕೆಂಬ ಸಂದೇಶ ರವಾನಿಸಿದ್ದರು. ಡಿಕೆಶಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಮುಖ್ಯಮಂತ್ರಿಯಾಗುವ ಆಸೆ ಎಲ್ಲರಿಗೂ ಇರುತ್ತದೆ. ತಮ್ಮ ಸಮುದಾಯದವರ ಮುಂದೆ ಡಿಕೆಶಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪೇನು? ಅಂತಿಮವಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸುವುದು ಶಾಸಕರು ಮತ್ತು ಹೈಕಮಾಂಡ್” ಎಂದಿದ್ದರು.

ಹೀಹೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಸಿಎಂ ಕುರ್ಚಿ ಕಾಳಗ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂಬರ್ಥದ ಮಾತುಗಳು ಕೇಳಿ ಬರುತ್ತಿವೆ. ಆದರೆ ಸಿಎಂ ಕುರ್ಚಿಯ ಸ್ಪರ್ಧೆಗಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಹೇಳಿಕೆಗಳ ಮರ್ಮವೇ ಬೇರೆ ಎಂಬುದು ಬಹುತೇಕ ಜನರಿಗೆ ಗೊತ್ತೇ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಆಪ್ತಮೂಲಗಳು ಹೇಳುವ ಪ್ರಕಾರ ಇದೊಂದು ಪಕ್ಕಾ ಕ್ಯಾಲ್ಕುಲೇಟೆಡ್ ದಾಳ. ಸಿದ್ದರಾಮಯ್ಯ ಮತ್ತು ಡಿಕೆಶಿ ಪರಸ್ಪರ ಮಾತಾಡಿಕೊಂಡೇ ಹೆಣೆದಿರುವ ತಂತ್ರಗಾರಿಕೆ. ಹಾಗಾದ್ರೆ ಹೋದಲ್ಲಿ ಬಂದಲ್ಲಿ ನಾನೇ ಸಿಎಂ ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ಹೇಳುತ್ತಿರುವುದರ ಗುಟ್ಟೇನು?

ಒಕ್ಕಲಿಗ ಮತ ಪಡೆಯಲು ಡಿಕೆಶಿ ಪ್ಲಾನ್
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಾಮಾನ್ಯವಾಗಿ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದವರೇ ಮುಖ್ಯಮಂತ್ರಿಯಾಗುವುದು ಪಕ್ಷದ ಸಂಪ್ರದಾಯ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇದು ಪಕ್ಕಾ ಲೆಕ್ಕಾಚಾರ ಹಾಕಿಯೇ ಡಿಕೆಶಿ ನೀಡಿರುವ ಹೇಳಿಕೆ. ಮುಖ್ಯವಾಗಿ ಒಕ್ಕಲಿಗ ಸಮುದಾಯದ ಮತಗಳನ್ನು ಕಾಂಗ್ರೆಸ್”ನತ್ತ ಸೆಳೆಯಲು ಡಿಕೆಶಿ ಈ ತಂತ್ರಗಾರಿಕೆ ಹೆಣೆದಿದ್ದಾರೆ. ಜೆಡಿಎಸ್ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್ ಕಡೆ ಸೆಳೆದ್ರೆ, ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಚರ್ಚೆಗಳು ಕಾಂಗ್ರೆಸ್ ಪಾಳೆಯದಲ್ಲಿ ನಡೆದಿವೆ. ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ “ಪಕ್ಷ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ” ಎಂಬರ್ಥದಲ್ಲಿ ಡಿಕೆಶಿ ಮಾತನಾಡುತ್ತಿರುವುದು ಇದೇ ಉದ್ದೇಶದಿಂದ.

ಅಹಿಂದ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣು !
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮತ್ತೊಂದು ರೀತಿಯ ತಂತ್ರಗಾರಿಕೆ. 2023ರಲ್ಲಿ ನಾನೇ ಮುಖ್ಯಮಂತ್ರಿ ಎಂಬರ್ಥದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿರುವುದೂ ಕೂಡ ಕಾಂಗ್ರೆಸ್ ತಂತ್ರಗಾರಿಕೆಯ ಮತ್ತೊಂದು ಭಾಗ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅಹಿಂದ ಮತಗಳು ಕಾಂಗ್ರೆಸ್’ಗೆ ಬೀಳುತ್ತವೆ ಎಂಬ ಲೆಕ್ಕಾಚಾರ ಇದರ ಹಿಂದೆ ಅಡಗಿದೆ. ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಅಹಿಂದ ಮತಗಳು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್”ಗೆ ಬಿದ್ರೆ, ಅತ್ತ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂಬ ಕಾರಣರಿಂದ ಒಕ್ಕಲಿಗ ಮತಗಳೂ ಕಾಂಗ್ರೆಸ್’ನತ್ತ ಟರ್ನ್ ಆದ್ರೆ ಕಾಂಗ್ರೆಸ್’ಗೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ. ಆ ಲಾಭದ ಮೇಲೆ ಕಣ್ಣಿಟ್ಟೇ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ “ಮುಖ್ಯಮಂತ್ರಿ ರೇಸ್”ಗೆ ಇಳಿದಿದ್ದಾರೆ.

ಕಾಂಗ್ರೆಸ್ ಬಹುಮತ ಪಡೆಯುವ ಸಾಧ್ಯತೆ ಎಷ್ಟು?
ರಾಜಕೀಯ ಪಂಡಿತರು ಹೇಳುವ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ. ಆದರೆ ಇದು ನಿಂತಿರುವುದು ಪಕ್ಷದ ನಾಯಕರ ನಡುವಿನ ಒಗ್ಗಟ್ಟಿನಲ್ಲಿ ಮತ್ತು ಚುನಾವಣೆಗೆ ಹೆಣೆಯಲಾಗುವ ಜಾತಿ ಲೆಕ್ಕಾಚಾರದಲ್ಲಿ.

  • ಸಿದ್ದರಾಮಯ್ಯ ಕಾರಣದಿಂದ ಅಹಿಂದ ಮತಗಳು ಕಾಂಗ್ರೆಸ್’ಗೆ ಬೀಳುವ ನಿರೀಕ್ಷೆ
  • ಡಿ.ಕೆ ಶಿವಕುಮಾರ್ ಕಾರಣಕ್ಕೆ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್’ನಿಂದ ಕಾಂಗ್ರೆಸ್ ಕಡೆ ಶಿಫ್ಟ್ ಆಗುವ ನಿರೀಕ್ಷೆ
  • ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ ನಂತರ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಲಿಂಗಾಯತ-ವೀರಶೈವ ಸಮುದಾಯದ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
  • ಅಹಿಂದ ಮತಗಳ ಜೊತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ 25% ಮತಗಳು ಕಾಂಗ್ರೆಸ್’ಗೆ ಬಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಖಚಿತ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇಂತಹ ಒಂದು ಜಾತಿ ಲೆಕ್ಕಾಚಾರವನ್ನು ಹೆಣೆದೇ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ “ಸಿಎಂ ಕುರ್ಚಿ ಕಾಳಗ”ಕ್ಕೆ ಇಳಿದಿದ್ದಾರೆ. ಅತ್ತ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಲಿಂಗಾಯತ ಮತಗಳನ್ನು ಸೆಳೆಯಲು ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ ಎಂ.ಬಿ ಪಾಟೀಲ್”ಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿ, ಫೀಲ್ಡ್”ಗೆ ಇಳಿಸಲಾಗಿದೆ.

ಇದನ್ನೂ ಓದಿ : KS Eshwarappa : ಮುಸಲ್ಮಾನರು ಎಲ್ಲಿರ್ತಾರೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ : ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಇದನ್ನೂ ಓದಿ : ಸರಕಾರಿ ಕಚೇರಿಗಳಲ್ಲಿ ಪೋಟೋ ವಿಡಿಯೋ ನಿಷೇಧ : ಸಾರ್ವಜನಿಕರಿಂದ ಆಕ್ರೋಶ, ಆದೇಶ ಹಿಂಪಡೆದ ಸರಕಾರ

Behind the Siddaramaiah DK Shivakumar CM race is a mystery that no one understands

Comments are closed.