BS Yediyurappa Resignation : ರಾಜೀನಾಮೆಯ ಸುಳಿವು ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ನಿರ್ಗಮಿಸೋದು ಬಹುತೇಕ ಖಚಿತ. ಖುದ್ದು ಯಡಿಯೂರಪ್ಪ ಅವರೇ ರಾಜೀನಾಮೆಯ ಕುರಿತು ಸುಳಿವನ್ನು ನೀಡಿದ್ದಾರೆ. ನನ್ನ ಪರವಾಗಿ ಹೇಳಿಕೆ, ಹೋರಾಟ ಮಾಡಬೇಡಿ ಎಂದು ಬಿಎಸ್‌ವೈ ಮನವಿ ಮಾಡಿದ್ದಾರೆ.

ಬೆಂಗಳೂರು ಸಮೀಪದ ಕಾಚರಕನಹಳ್ಳಿಯಲ್ಲಿ ನಡೆದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡಿದ್ದು ಪೂಜೆಯನ್ನು ಸಲ್ಲಸಿದ್ದಾರೆ. ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಜುಲೈ 25ರಂದು ರಾಜ್ಯ ಸರಕಾರಕ್ಕೆ ಎರಡು ವರ್ಷ ಭರ್ತಿಯಾಗಲಿದೆ. ಅಲ್ಲದೇ ಹೈಕಮಾಂಡ್‌ ನಿಂದ ಸೂಚನೆ ಬರಲಿದೆ. ಹೀಗಾಗಿ ಹೈಕಮಾಂಡ್‌ ಸೂಚನೆಯ ಆಧಾರದ ಮೇಲೆ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ತನ್ನನ್ನು ಭೇಟಿ ಮಾಡಿದ ಮಠಾಧೀಶರಿಗೆ ಯಡಿಯೂರಪ್ಪ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ನೀವು ಕೊಟ್ಟ ಪ್ರೀತಿಗೆ ನಾನು ಚಿರಋಣಿ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವುದು ನನ್ನ ಮುಂದಿನ ದಾರಿ. ಅದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಅವರ ಹೇಳಿಕೆ, ರಾಜಕೀಯದಲ್ಲಿನ ವಿದ್ಯಾಮಾನಗಳನ್ನು ಗಮನಿಸಿದ್ರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಸರಕಾರಕ್ಕೆ ಎರಡು ವರ್ಷ ತುಂಬಿದ ಕಾರ್ಯಕ್ರಮದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡುವುದು ಸ್ಪಷ್ಟವಾದಂತಿದೆ. ಅಲ್ಲದೇ ಹೈಕಮಾಂಡ್‌ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದಂತೆ ಕಂಡುಬರುತ್ತಿದೆ.

Comments are closed.