ಮಂಗಳೂರು : ರಾಜ್ಯ ಸರಕಾರ ಕೊರೊನಾ ನಡುವಲ್ಲೇ ಸಂಪುಟ ವಿಸ್ತರಣೆ ಮುಂದಾಗಿದೆ. ಶೀಫ್ರದಲ್ಲಿಯೇ ಹೊಸದಾಗಿ 6 ಮಂದಿ ಸಚಿವರಾಗಿ ನೇಮಕವಾಗೋದು ಗ್ಯಾರಂಟಿ. ಈ ನಡುವಲ್ಲೇ ಕರಾವಳಿಯ ಇಬ್ಬರು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಎಸ್.ಅಂಗಾರ ಅವರು ಸಚಿವರಾಗೋದು ಗ್ಯಾರಂಟಿ.

ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. ಕುಂದಾಪುರದ ವಾಜಪೇಯಿ ಅಂತಾ ಕರೆಯಿಸಿಕೊಳ್ಳುವ ಹಾಲಾಡಿ ಶ್ರೀನಿವಾಸ ಶೆಟ್ಟರು ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರು. ಸರಿ ಸುಮಾರು 20 ವರ್ಷಗಳಿಗೂ ಅಧಿಕ ಕಾಲ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುತ್ತಿದ್ದಾರೆ. 3 ಬಾರಿ ಬಿಜೆಪಿಯ ಶಾಸಕರಾಗಿ, ಒಂದು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರದ್ದು.

ಈ ಹಿಂದೆಯೇ ಹಾಲಾಡಿ ಸಚಿವರಾಗ್ತಾರೆ ಅನ್ನುವ ಮಾತುಗಳು ಕೇಳಿಬಂದಿದ್ದರೂ ಕೂಡ ಇದುವರೆಗೂ ಗೂಟದ ಕಾರಿನಲ್ಲಿ ಕುಳಿತುಕೊಳ್ಳುವ ಭಾಗ್ಯ ಬಂದಿಲ್ಲ. 2012ರಲ್ಲಿ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪಕ್ಷ ತೊರೆದು ಸ್ವತಂತ್ರರಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ತದನಂತರ ಬಿಜೆಪಿ ಸೇರಿದ್ದರೂ ಕೂಡ ಸಚಿವ ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರು ಕೈತಪ್ಪುತ್ತಲೇ ಇತ್ತು. ಆದ್ರೀಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.


ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಹಾಲಾಡಿ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಪಕ್ಷದ ಹೈಕಮಾಂಡ್ ಕೂಡ ಹಾಲಾಡಿ ಅವರು ಸಚಿವರಾಗೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಚಿವರಾಗಿ ಆಯ್ಕೆಯಾದ್ರೆ ಕುಂದಾಪುರ ಕ್ಷೇತ್ರದಿಂದ ಗೆದ್ದ ಶಾಸಕರ ಪೈಕಿ ಮೊದಲ ಸಚಿವರು ಎನಿಸಿಕೊಳ್ಳಲಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರ ಹೆಸರು ಕೂಡ ಸಚಿವ ಸ್ಥಾನದ ರೇಸ್ ನಲ್ಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರವಾಗಿ ಸರಿ ಸುಮಾರು 58 ವರ್ಷಗಳೇ ಕಳೆದಿದೆ. ಆದರೆ ಕ್ಷೇತ್ರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರು ಕೂಡ ಸಚಿವರಾಗಿ ಆಯ್ಕೆಯಾಗಿಲ್ಲ.

ಸುಮಾರು 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಅಂಗಾರ ಕರಾವಳಿ ಭಾಗದ ಅತ್ಯಂತ ಹಿರಿಯ ಶಾಸಕರೂ ಹೌದು. 1994ರಿಂದಲೂ ಸತತವಾಗಿ ಸೋಲಿಲ್ಲದ ಸರದಾರರಂತೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಅಂಗಾರ ಶಾಸಕರಾಗಿ ಆಯ್ಕೆಯಾಗುತ್ತಲೇ ಬಂದಿದ್ದಾರೆ.

ಇದುವರೆಗೂ ಅಂಗಾರ್ ತನ್ನನ್ನ ಸಚಿವರನ್ನಾಗಿ ಮಾಡಬೇಕೆಂದು ಪಕ್ಷದ ಮೇಲೆ ಒತ್ತಡ ತಂದಿಲ್ಲ. ಆದರೆ ಕಳೆದ ಬಾರಿ ಎಸ್.ಅಂಗಾರ ಸಚಿವರಾಗ್ತಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಂಗಾರ ಅವರಿಗೆ ಮಂತ್ರಿಸ್ಥಾನ ಕೈತಪ್ಪಿತ್ತು. ಆದ್ರೀಗ ಮತ್ತೆ ಅಂಗಾರ ಅವರ ಹೆಸರು ಚಾಲ್ತಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮಂದಿ ಬಿಜೆಪಿ ಶಾಸಕರಿದ್ದರೂ ಕೂಡ ಯಾರಿಗೂ ಸಚಿವ ಸ್ಥಾನ ಧಕ್ಕಿಲ್ಲ. ಹೀಗಾಗಿಯೇ ಅಂಗಾರ ಅವರಿಗೆ ಸಚಿವ ಸ್ಥಾನ ಲಭಿಸುವುದು ಗ್ಯಾರಂಟಿ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 10 ಮಂದಿ ಬಿಜೆಪಿ ಶಾಸಕರಿದ್ದರೂ ಕೂಡ ಯಾವೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಧಕ್ಕಿಲ್ಲ. ಯಡಿಯೂರಪ್ಪ ಕೂಡ ಕರಾವಳಿ ಭಾಗಕ್ಕೆ ಪ್ರಾಶಸ್ತ್ಯವನ್ನು ಕೊಡುವ ನಿಟ್ಟಿನಲ್ಲಿ ಮನಸ್ಸು ಮಾಡಿದ್ದಾರೆನ್ನಲಾಗುತ್ತಿದೆ. ನಿಗಮ ಮಂಡಳಿ ನೇಮಕಾತಿಯಲ್ಲಿಯೂ ಹಾಲಾಡಿ ಹಾಗೂ ಅಂಗಾರ ಹೆಸರು ಕೇಳಿಬಂದಿಲ್ಲ. ಹೀಗಾಗಿಯೇ ಸಚಿವ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ.