Naleen Kumar Kateel : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ನಳೀನ್​ ಕುಮಾರ್​ ವಿರುದ್ಧ ಶುರುವಾಯ್ತು ಅಭಿಯಾನ

ಮಂಗಳೂರು : Naleen Kumar Kateel : ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಕರಾವಳಿ ಜನತೆಯ ವಿರೋಧವನ್ನು ಎದುರಿಸುತ್ತಿದ್ದಾರೆ. ಸೆಪ್ಟೆಂಬರ್​ 2ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಳೀನ್​ ಕುಮಾರ್​ ಕಟೀಲ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಆರಂಭಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಸ್ಥಾನದಿಂದ ಇವರನ್ನು ಬದಲಿಸುವಂತೆ ಅಭಿಯಾನ ನಡೆಯುತ್ತಿದೆ.

ಹಿಂದುತ್ವದ ಜೊತೆಗೆ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ನಾಯಕನ ಅಗತ್ಯವಿದೆ. ಪ್ರಧಾನಿ ಮೋದಿಯನ್ನು ಸ್ವಾಗತಿಸುವ ಮುನ್ನವೇ ಸಂಸದರ ಬದಲಾವಣೆ ಕೂಗು ಕೇಳಿ ಬರಲಿ ಅಂತಾ ಅಭಿಯಾನವನ್ನು ನಡೆಸಲಾಗುತ್ತಿದೆ. ನಳೀನ್​ ಕುಮಾರ್​ ಕಟೀಲ್​ ಬದಲಾಗಿ ಸತ್ಯಜೀತ್​ ಸುರತ್ಕಲ್​​ಗೆ ಸಂಸದರ ಸ್ಥಾನ ನೀಡುವಂತೆ ಆಗ್ರಹಿಸಲಾಗುತ್ತಿದೆ. ಇದಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಕೇಳಿ ಬರ್ತಿದೆ.

ಮೋದಿ ಪರ ಪ್ರಚಾರ ಮಾಡುವ ಪೋಸ್ಟ್​ ಕಾರ್ಡ್​ಗಳಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಿಸುವಂತೆ ಪೋಸ್ಟ್​ ಮಾಡಲಾಗಿದೆ. ಮಂಗಳೂರನ್ನು ನಂಬರ್​ 1 ಮಾಡಬೇಕು ಅಂದರೆ ಸಂಸದರನ್ನು ಬದಲಾಯಿಸಲೇಬೇಕು. ದುರ್ಬಲ ಸಂಸದ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆಗೆ ಧ್ವನಿ ಎತ್ತಲೇಬೇಕಾಗಿದೆ ಎಂದು ಪೋಸ್ಟ್​ ಹಾಕಲಾಗಿದೆ. ಅಂದಹಾಗೆ ಈ ಪೋಸ್ಟ್​ ಕಾರ್ಡ್​ಗೆ ಎಷ್ಟರ ಮಟ್ಟಿಗೆ ಅಭಿಮಾನಿಗಳು ಇದ್ದಾರೆ ಅಂದರೆ ಸ್ವತಃ ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಪೋಸ್ಟ್​​ ಕಾರ್ಡ್​ನ ಫಾಲೋವರ್​ಗಳಲ್ಲಿ ಒಬ್ಬರಾಗಿದ್ದಾರೆ. ಮೂಡು ಬಿದಿರೆ ಮೂಲದ ಮಹೇಶ್​ ವಿಕ್ರಂ ಹೆಗ್ಡೆ ಎಂಬವರಿಗೆ ಸೇರಿದ ಪೋಸ್ಟ್​ ಕಾರ್ಡ್​ ವೆಬ್​ ಇದಾಗಿದೆ.

ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ತೀವ್ರ ಹಿನ್ನೆಡೆ ಉಂಟಾಗಿದೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸದ ನಳೀನ್​ ಕುಮಾರ್​ ಕಟೀಲ್​ ವಿರುದ್ಧ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಅವ್ಯವಸ್ಥೆಯ ಹಾದಿಯನ್ನು ಹಿಡಿದಿವೆ. ನಳೀನ್​ ಕುಮಾರ್​ ಕಟೀಲ್​ ಕೇವಲ ಭಾಷಣ ಮಾಡುವ ಸಂಸದ. ಸುರತ್ಕಲ್​ ಟೋಲ್​​ ವಿಲೀನಗೊಳಿಸುತ್ತೇವೆ ಎಂದು ಏಳು ವರ್ಷಗಳಿಂದ ಪೊಳ್ಳು ಭರವಸೆ ನೀಡಿದ್ದಾರೆ .

ನಳೀನ್​ ಕುಮಾರ್​ ಕಟೀಲ್​ಗೆ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವಿದೆ. ಬಣ ರಾಜಕೀಯದ ಮೂಲಕ ಟಾರ್ಗೆಟ್​ ಪಾಲಿಟಿಕ್ಸ್​ ನಡೆಸುತ್ತಿದ್ದಾರೆ. ಹಿಂದುತ್ವ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಿರರ್ಗಳವಾಗಿ ಹಿಂದಿ ಹಾಗೂ ಇಂಗ್ಲಿಷ್​ ಭಾಷೆಯ ಮೇಲೆ ಹಿಡಿತವಿಲ್ಲದ ಕಾರಣ ಕೇಂದ್ರದ ಜೊತೆ ಸಂವಹನದ ಕೊರತೆ ಉಂಟಾಗಿದೆ. ಎತ್ತಿನಹೊಳೆ ವಿಚಾರದಲ್ಲಿಯೂ ಯೋಜನೆ ನಿಲ್ಲಿಸುವ ಭರವಸೆ ನೀಡಿ ಬೃಹತ್​ ಪಾದಯಾತ್ರೆ ನಡೆಸಿದ್ದರು. ಆದರೆ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕಾಮಗಾರಿ ಮುಂದುವರಿಯುತ್ತಿದೆ ಎಂದು ಪೋಸ್ಟ್​ ಕಾರ್ಡ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ : Ganesh festival in Shimoga : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸಲು ಹುನ್ನಾರ : ಸಂಚಲನ ಮೂಡಿಸಿದ ಅನಾಮಧೇಯ ಪತ್ರ

ಇದನ್ನೂ ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

Campaign on social media against Naleen Kumar Kateel

Comments are closed.