CM Basavaraj Bommai: ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂತ್ರ ಫಲಿಸಲಿದೆಯೇ?

ವಿಜಯನಗರದಲ್ಲಿ ನಡೆದ ನಿನ್ನೆಯ ಕಾರ್ಯಕಾರಿಣಿಯಲ್ಲಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡುವ ಉತ್ಸಾಹ ಕಂಡು ಬಂದಿದೆ. ವಿಜಯನಗರದ ಖಾಸಗಿ ಹೋಟೆಲ್ ಒಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರೊಂದಿಗೆ ಇದೇ ವಿಚಾರವಾಗಿ ನಡ್ಡಾ ಒಂದು ತಾಸು ಮಾತುಕತೆ ನಡೆಸಿದ್ದಾರೆ ಎನ್ನುತ್ತಿದೆ ಬಿಜೆಪಿ ಮೂಲಗಳು. ಆದರೆ, ಈ ಬಾರಿ ನಡೆಯುವ ಸಂಪುಟ ವಿಸ್ತರಣೆ ದೊಡ್ಡ ಗಾತ್ರದಲ್ಲ ಅನ್ನೋ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದು ತೀವ್ರತರವಾದ ಅಪಾಯ ಒಡ್ಡುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಅನಿವಾರ್ಯವಾಗಿ ಮಾಡುತ್ತಿರುವ ಸಂಪುಟ ಸರ್ಜರಿ ಎನ್ನುವ ಮಾತು ಕೇಳಿಬರುತ್ತಿದೆ.

.ತಿಂಗಳ ಹಿಂದೆ ಅಮಿತ್ ಶಾ ಬೆಂಗಳೂರ ಭೇಟಿಯ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಹಾಗೂ ಅತೃಪ್ತರ ಸಂತೈಸುವ ವಿಚಾರ ಪ್ರಧಾನವಾಗಿ ಚರ್ಚೆನಡೆಯಿತು. ಆದರೆ, ಅಮಿತ್ ಶಾ ಯಾವುದೇ ನಿರ್ಧಾರವನ್ನು ತಿಳಿಸದೆ, ಚುನಾವಣೆಗೆ ಬೇಕಾದ ತಯಾರಿಯ ಬಗ್ಗೆ ಬಿಜೆಪಿ ಸಚಿವರು, ಶಾಸಕರಿಗೆ ಪಾಠ ಮಾಡಿ ಹೋದರು. ಮಾಧ್ಯಮಗಳ ಮುಂದೆ, ದೆಹಲಿಗೆ ಹೋದನಂತರ ಒಂದು ವಾರದಲ್ಲಿ ಸಂಪುಟ ವಿಸ್ತರಣೆಯನ್ನು ಮಾಡು ಆಶ್ವಾಸನೆ ನೀಡಿದರು. ಶಾ ಅವರ ಭೇಟಿಯ ನಂತರ ಆಕಾಂಕ್ಷಿಗಳಲ್ಲಿ ನವ ಉತ್ಸಾಹ ಮೂಡಿಸಿದ್ದರಲ್ಲಿ ಅನುಮಾನವಿಲ್ಲ.

ಹದಿನೈದು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ಸಂಭಾವ್ಯ ಮಂತ್ರಿಗಳ ಪಟ್ಟಿಹಿಡಿದು ಹೋಗಿದ್ದರು. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು, ಸಂಪುಟ ವಿಸ್ತರಣೆಯಿಂದ ಸಚಿವಸ್ಥಾನ ಕಳೆದುಕೊಳ್ಳುವವರಿಂದಲೇ ಪಕ್ಷಕ್ಕೆ ಅಪಾಯ ಒದಗಿದರೆ ಗತಿ ಏನು, ಇದಕ್ಕೆ ಪರಿಹಾರವೇನು ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು. ಅದಕ್ಕೆ ಸೂಕ್ತ ಉತ್ತರ ಬೊಮ್ಮಾಯಿ ಅವರಲ್ಲಿ ಇರಲಿಲ್ಲವಾದ್ದರಿಂದ, ಮತ್ತೆ ತೀರ್ಮಾನದ ಬಾಲು ಅಮಿತ್ ಶಾ ಅಂಗಳಕ್ಕೆ ಬಿದ್ದಿತ್ತು

ಈ ವಿಚಾರವಾಗಿ ನಡ್ಡಾ ಅವರು ಬಸವರಾಜ ಬೊಮ್ಮಾಯಿ ಅವರನ್ನು ಸಲಹೆ ಕೇಳಲಾಗಿ, ಅವರು ಸಣ್ಣ ಪ್ರಮಾಣದ ಸರ್ಜರಿಯಿಂದಲೇ ದೊಡ್ಡ ಲಾಭ ಯಾವ ರೀತಿ ಆಗಲಿದೆ ಎನ್ನುವುದನ್ನು ಅವರಿಗೆ ವಿವರಿಸಿದ್ದಾರಂತೆ.

ಎಲ್ಲದಕ್ಕೂ ಹೈಕಮಾಂಡೇ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆ ಮಾಡಿದರೂ, ಮಾಡದೇ ಇದ್ದರೂ ತಲೆನೋವು ಇದ್ದೆ ಇದೆ ಅನ್ನೋದು ತಿಳಿದಿದೆ. ನಿನ್ನೆ ನಡೆದ ನಡ್ಡಾ ಅವರೊಂದಿಗಿನ ಮಾತುಕತೆ ಸಂದರ್ಭದಲ್ಲಿ, ಸಂಪುಟದಿಂದ ಕೈ ಬಿಡುವ, ಸೇರಿಸಿಕೊಳ್ಳುವ ಎಲ್ಲ ಸರ್ಜನ್ ಪಾತ್ರವನ್ನು ಹೈಕಮಾಂಡೇ ಮಾಡಿದರೆ ಒಳಿತು ಎಂದು ಹೇಳುವ ಮೂಲಕ ತಮ್ಮ ಮೇಲೆ ಬರಬಹುದಾದಂತ ಸಂಭವನೀಯ ಆರೋಪ, ಒತ್ತಡದಿಂದ ಮುಕ್ತರಾಗಲು ಬೊಮ್ಮಾಯಿ ಯೋಜನೆ ಮಾಡಿದ್ದಾರೆ.

ನಡ್ಡಾ ಅವರೊಂದಿಗಿನ ಚರ್ಚೆ ಬಹಳ ಗುಪ್ತವಾಗಿದ್ದು, ಇದರಲ್ಲಿ ರಾಜ್ಯ ಉಸ್ತವಾರಿ ಅರುಣ್ ಸಿಂಗ್ ಕೂಡ ಭಾಗವಹಿಸಿರಲಿಲ್ಲ. ಕೇವಲ ಮುಖ್ಯಮಂತ್ರಿಗಳು ಮತ್ತು ನಡ್ಡಾ ಇಬ್ಬರೇ ಕುಳಿತು ಮಾತುಕತೆ ನಡೆಸಿದ್ದಾರೆ ಎನ್ನುತ್ತಿದೆ ಬಿಜೆಪಿ ಮೂಲಗಳು. ಇತ್ತ ಸಂಭವನೀಯ ಸಚಿವರ ಪಟ್ಟಿ ಆಗಲೇ ಓಡಾಡುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಸ್ಥಾನ ಕಳೆದು ಕೊಳ್ಳುವವರ ಎನ್ನುವ ಸುದ್ದಿ ಜೋರಾಗಿದೆ. ಸೋಮಣ್ಣ- ಅಶೋಕ್ ಹಾಗೂ ಅಶ್ವತ್ಥನಾರಾಯಣ-ಸುಧಾಕರ ನಡುವೆ ಸಾರ್ವಜನಿಕವಾಗಿಯೇ ವಾಗ್ಯುದ್ದಗಳಾಗಿವೆ. ಅಶೋಕ್ ಮೂಲತಃ ಯಡಿಯೂರಪ್ಪನವರ ಬಣದಿಂದ ಬಂದವರು. ಅದೇ ರೀತಿ, ಸೋಮಣ್ಣ ಕೂಡ. ಇಬ್ಬರ ನಡುವಿನ ವಿರಸವನ್ನು ಯಡಿಯೂರಪ್ಪನವರಿಗಿಂತ ಬೊಮ್ಮಾಯಿ ಬಹಳ ಚೆನ್ನಾಗಿ ನಿಭಾಯಿಸಿದ್ದರಾದರೂ, ಇತ್ತೀಚೆಗೆ ಅಶೋಕ್ ಬಹಳ ನಿಶ್ಯಬ್ದರಾಗಿದ್ದಾರೆ. ಅಶ್ವತ್ಥನಾರಾಯಣ-ಸುಧಾಕರರ ವಿರಸವನ್ನು ಬೊಮ್ಮಾಯಿ ಚೆನ್ನಾಗಿ ನಿಭಾಯಿಸಿದ್ದರು, ಸುಧಾಕರ್ ಬೊಮ್ಮಾಯಿ ಅವರಿಗೆ ಮೊದಲಿಗಿಂತ ಬಹಳ ಹತ್ತಿರವಾಗಿದ್ದಾರೆ.

ಇದು ಮೇಲನೋಟಕ್ಕೆ ಕಂಡು ಬರುತ್ತಿರುವ ವಿರಸಗಳು. ಆಂತರಿಕವಾಗಿ, ಕುರ್ಚಿ ಆಕಾಂಕ್ಷಿಗಳ ಬೇಗುದಿಗಳು ಬೇರೆ ಇವೆ. ಅರವಿಂದ್ ಬೆಲ್ಲದ್ ಈಗಾಗಲೇ ಅಮಿತ್ ಶಾ ಅವರ ಜೊತೆ ಗುಸುಗುಸು ಮಾತನಾಡಿದ್ದಾರೆ. ಶ್ರೀಮಂತ ಪಾಟೀಲ್, ರೇಣುಕಾಚಾರ್ಯ ಸಾರ್ವಜನಿಕವಾಗಿ ತನಗೆ ಸಚಿವಸ್ಥಾನ ಬೇಕು ಅಂದಿದ್ದಾರೆ. ಈಗೀಗ, ರಮೇಶ್ ಜಾರಕಿ ಹೊಳಿ ಕೂಡ ಆಕಾಂಕ್ಷಿತರಂತೆ ಕಾಣುತ್ತಿದ್ದಾರೆ. ವಿಜಯೇಂದ್ರ, ರಾಜೂಗೌಡ, ಬಸವನಗೌಡ ಪಾಟೀಲ ಯತ್ನಾಳ್ ಇವರೆಲ್ಲ ಹೈಕಮಾಂಡ್ ಅವರ ಮೇಲೆ ಒತ್ತಡ ಏರಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಕೂಡ ಸಚಿವಸ್ಥಾನಕ್ಕಾಗಿಯೇ. ಬಿಜೆಪಿ ಪಕ್ಷದ ಇಂಥ ಆಂತರಿಕ ವಿರಸ, ಆಕಾಂಕ್ಷೆಗಳನ್ನು ಚುನಾವಣೆ ತನಕ ತಳ್ಳುವುದು ಅಪಾಯ ಎನ್ನುವುದು ಮುಖ್ಯಮಂತ್ರಿ ತಿಳಿದಿದೆ.

ಅಕಾಲಿಕವಾಗಿ ತೆರವಾಗಿರುವ ಈಶ್ವರಪ್ಪನವರ ಖಾತೆಯನ್ನು ಕೂಡ ಹೊಸ ಸಚಿವರಿಂದ ತುಂಬಿಸುವ ಯೋಜನೆ ನಡೆಯುತ್ತಿದೆ. ಹೀಗಾಗಿ, ಈ ಬಾರಿ ಕಾರ್ಯಕಾರಿಣಿಯಿಂದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವುದರಲ್ಲಿ ಅನುಮಾನವಿಲ್ಲ. ಇದೇ ಸಂದರ್ಭದಲ್ಲಿ ನಡ್ಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೆಲ ಚುನಾವಣ ತಂತ್ರ ಬೋಧನೆ ಮಾಡಿದ್ದಾರಂತೆ. ಅದರಲ್ಲಿ ಮೊದಲನೆಯದು, ಸ್ವಲ್ಪ ಆಕ್ರಮಣ ಶೀಲರಾಗಿ ಕೆಲಸ ಮಾಡುವುದು ಒಂದು. ಇದರ ಫಲಶೃತಿಯಂತೆ. ಮುಖ್ಯಮಂತ್ರಿಗಳು ನಡ್ಡಾ ಅವರೊಂದಿಗಿನ ಚರ್ಚೆಯ ನಂತರ ಪೂರ್ತಿ ಆಕ್ಟೀವ್ ಆಗಿದ್ದಾರೆ. ಹುರುಪಿನಿಂದ ಮಾತುಕತೆ ನಡೆಸುತ್ತಿದ್ದಾರೆ.

ಎರಡನೆಯದು ಧರ್ಮದ ವಿಚಾರಗಳನ್ನು ಬದಿಗೊತ್ತಿ, ಅಭಿವೃದ್ಧಿಯ ಮಂತ್ರ ಜಪಿಸಲು ಸೂಚಿಸಿದ್ದಾರೆ. ಸಂಪುಟ ಪುನರ್ ರಚನೆ ನಡೆದರೂ,ಅದರಿಂದ ಪಕ್ಷದಲ್ಲಿ ಉಂಟಾಗಬಹುದಾದ ಅಸಮಾಧಾನದಿಂದ ಮುಖ್ಯಮಂತ್ರಿಗಳು ಯಾವ ರೀತಿ ಹೊರಬರುತ್ತಾರೆ ಅನ್ನೋದು ಮಾತ್ರ ಕುತೂಹಲಕಾರಿಯಾಗಿದೆ. ಈಗಾಗಲೇ ಅವರು ಹೈಕಾಂಡ್ ತೋರಿಸಿ ಬಚಾವ್ ಆಗುವ ತಂತ್ರ ಹೆಣೆದಿದ್ದರೂ ಅದು ಎಷ್ಟರ ಮಟ್ಟಿಗೆ ಫಲಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಇದನ್ನೂ ಓದಿ : cm basavaraj bommai :ರಾಜ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿದೆ : ವಿಪಕ್ಷಗಳಿಗೆ ಬೊಮ್ಮಾಯಿ ಟಾಂಗ್​

ಇದನ್ನೂ ಓದಿ : siddaramaiah slams bjp : ಕಾಂಗ್ರೆಸ್​ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೆಂಡ..!

(CM Basavaraj Bommai Will the chief minister basavaraj bommai’s plan win against unsatisfied Bjp mla’s)

Comments are closed.