ಬೆಂಗಳೂರು : ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಹೆಸರು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳುವ ಮೂಲಕ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಾಂಗ್ರೆಸ್ ನಾಯಕಿ ಉಮಾಶ್ರೀ ಕರಂದ್ಲಾಜೆ ವಿರುದ್ದ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವೆ ಉಮಾಶ್ರೀ ಅವರು, ಶೋಭಾ ಕರಂದ್ಲಾಜೆಗೆ ಅವರಿಗೆ ಖಾರವಾಗಿ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ. ಕುಸುಮಾ ಅವರು ಡಿ.ಕೆ.ರವಿಯವರನ್ನು ಅಧಿಕೃತವಾಗಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಅವರ ಗಂಡನ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಲು ಇವರು ಯಾರು. ಇಷ್ಟಕ್ಕೂ ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ ಎಂದಿದ್ದಾರೆ.
ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ತಂದೆ ನೋವಿನ ಬಗ್ಗೆ ಅರಿವಿರಬಹುದು. ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಅವರ ನೋವು ಇವರಿಗೆ ಅರ್ಥವಾಗುವುದಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೇ ಶೋಭಾ ಕರಂದ್ಲಾಜೆ ಅವರು ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಡಲಾಗದೆ ಜನರನ್ನು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಯಾವ ಹೆಣ್ಣು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ಕಟ್ಟುಪಾಡುಗಳು ಇಲ್ಲ. ಗಂಡ ಬಿಟ್ಟವರು, ವಿಧವೆಯಾದವರು ಚುನಾವಣೆಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ.

ಬಿಜೆಪಿಯ ಭೇಟಿ ಬಚಾವೊ – ಭೇಟಿ ಫಡಾವೋ ಎನ್ನುವ ಯೋಜನೆಯೇ ಸುಳ್ಳು. ಇಂತಹ ಯೋಜನೆಗಳಿಂದ ಯಾವುದೇ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಆಗುವುದಿಲ್ಲ. ಆರ್.ಆರ್.ನಗರದಲ್ಲಿ ಬಿಜೆಪಿ ನಾಯಕರು ಸೋಲುವ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಉಮಾಶ್ರೀ ಹೇಳಿದರು.