ಯಡಿಯೂರಪ್ಪ ರಾಜೀನಾಮೆ ಕೊಡ್ತಾರಾ..? ಸಿಎಂ ಹುದ್ದೆಯಲ್ಲಿಯೇ ಉಳಿತಾರಾ..? ಇಂದೇ ಬರುತ್ತಾ ಹೈಕಮಾಂಡ್‌ ಸಂದೇಶ…!!

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರ ಇದೀಗ ಕ್ಲೈಮ್ಯಾಕ್ಸ್‌ಗೆ ಹಂತಕ್ಕೆ ತಲುಪಿದೆ. ಹೈಕಮಾಂಡ್‌ ಈ ಕುರಿತು ಇಂದು ಸಂದೇಶ ರವಾನಿಸುವ ಸಾಧ್ಯತೆಯಿದ್ದು, ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುತ್ತಾರಾ..? ಇಲ್ಲಾ ರಾಜೀನಾಮೆ ಕೊಡ್ತಾರಾ ಅನ್ನೋದು ಇಂದೇ ನಿರ್ಧಾರವಾಗಲಿದೆ.

ಸಿಎಂ ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ನಾಯಕತ್ವ ಬದಲಾವಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಜೊತೆ ಚರ್ಚೆ ನಡೆಸಿದ್ದರು. ಚರ್ಚೆಯ ವೇಳೆಯಲ್ಲಿ ಮೂವರು ನಾಯಕರು ಕೂಡ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಯಾವಾಗ ರಾಜೀನಾಮೆಯನ್ನು ನೀಡಬೇಕು ಅನ್ನುವ ಕುರಿತು ತಿಳಿಸಿದ್ದರು. ಅಂತೆಯೇ ಜುಲೈ 25 ರಂದು ಸಂಜೆ ಹೈಕಮಾಂಡ್‌ನಿಂದ ಸಂದೇಶ ಬರುತ್ತೆ ಅಂತಾನೂ ಯಡಿಯೂರಪ್ಪ ಹೇಳುತ್ತಿದ್ದಾರೆ.

ಇದೇ ಕಾರಣಕ್ಕೆ ಎಲ್ಲರ ಚಿತ್ತ ಇದೀಗ ಬಿಜೆಪಿ ಹೈಕಮಾಂಡ್‌ ಸಂದೇಶದತ್ತ ನೆಟ್ಟಿದೆ. ಯಡಿಯೂರಪ್ಪ ರಾಜೀನಾಮೆ ನೀಡ್ತಾರಾ.. ಇಲ್ಲಾ ಸಿಎಂ ಹುದ್ದೆಯಲ್ಲಿಯೇ ಮುನ್ನಡೆಯುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಈಗಾಗಲೇ ರಾಷ್ಟ್ರೀಯ ನಾಯಕರು ಪ್ರವಾಸದಲ್ಲಿದ್ದಾರೆ. ಅಮಿತ್‌ ಶಾ ಈಗಾಗಲೇ ಎರಡು ದಿನಗಳ ಕಾಲ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಅಮಿತ್‌ ಶಾ ಇಂದು ಸಂಜೆಯ ವೇಳೆಗೆ ದೆಹಲಿಗೆ ಆಗಮಿಸುವ ಸಾಧ್ಯತೆಯಿದೆ. ಇನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಗಾಗಲೇ ಗೋವಾ ಪ್ರವಾಸದಲ್ಲಿದ್ದು, ಅವರು ಕೂಡ ದೆಹಲಿಗೆ ಆಗಮಿಸಲಿದ್ದಾರೆ. ಅಲ್ಲದೇ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ : ಬೂಕನಕೆರೆ TO ವಿಧಾನಸೌಧ : ನಿಂಬೆಹಣ್ಣು ವ್ಯಾಪಾರಿ ಮಗ, ರೈಸ್ ಮಿಲ್ ರೈಟರ್ ಯಡಿಯೂರಪ್ಪ ಸಿಎಂ ಆಗಿದ್ದು ಹೇಗೆ ಗೊತ್ತಾ ?

ಇಂದು ರಾಷ್ಟ್ರೀಯ ನಾಯಕರಾದ ಅಮಿತ್‌ ಶಾ, ಜೆಪಿ ನಡ್ಡಾ ಹಾಗೂ ಬಿ.ಎಲ್.ಸಂತೋಷ್‌ ಅವರು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯದ ಹೊಸ ಮುಖ್ಯಮಂತ್ರಿಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಭೆ ನಡೆಸುವ ಕುರಿತು ಇದುವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿಯೂ ಹೊರಬಿದ್ದಿಲ್ಲ. ಆದರೆ ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಯ ಕುರಿತು ಇಂದು ನಿರ್ಧಾರವಾಗೋದು ಬಹುತೇಕ ಖಚಿತ.

ಯಡಿಯೂರಪ್ಪ ಈಗಾಗಲೇ ರಾಜೀನಾಮೆ ನೀಡೋದಕ್ಕೆ ಸಿದ್ದವಾದಂತೆ ಕಂಡು ಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ಯಡಿಯೂರಪ್ಪ ರಾಜೀನಾಮೆಯ ಕುರಿತು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಒಟ್ಟಿನಲ್ಲಿ ನಾಯಕತ್ವ ಬದಲಾವಣೆಯ ಗುಮ್ಮಕ್ಕೆ ಇಂದು ತೆರೆ ಬೀಳಲಿದೆ.

Comments are closed.