ಮಂಡ್ಯ : ರಾಜ್ಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಎನ್ನುವ ಮೂಲಕ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಂ ಆಗುವ ಆಶಯ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಹೊಡೆಯಲು ಹೊರಟಿವೆ, ಅಲ್ಲದೇ ರಾಜ್ಯದ ಸಮಸ್ಯೆಯನ್ನು ಬಗೆ ಹರಿಸಲು ಕಿತ್ತಾಟ ಮಾಡುತ್ತಿವೆ. ಉಸ್ತುವಾರಿಗಳನ್ನು ನೇಮಿಸುವುದು ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಅಲ್ಲ, ಅದು ಲೂಟಿಯ ಒಂದು ಭಾಗವನ್ನು ಕೊಂಡೊಯ್ಯುವ ಸಲುವಾಗಿ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ನಮ್ಮ ಸಂಪತ್ತನ್ನು ಲೂಟಿ ಮಾಡಲು ಪ್ರೋತ್ಸಾಹ ನೀಡುತ್ತಿವೆ. ರಾಜ್ಯದ ಜನತೆ ಎಚ್ಚೆತ್ತು ಕೊಳ್ಳಬೇಕಾಗಿದೆ. ಆದರೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಿರುವುದು ಕೇವಲ ಅಧಿಕಾರಕ್ಕಾಗಿ ಅಲ್ಲ. ಬದಲಾಗಿ ಗೌರವಯುತ ಬದುಕು ಹಾಗೂ ನಾಡಿನ ಸಮಸ್ಯೆ ಪರಿಹಾರ ಮಾಡಲು ಎಂದಿದ್ದಾರೆ.
ಇನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವಾನಾಥ್ ವಿರುದ್ದ ಕುಮಾರಸ್ವಾಮಿ ಗರಂ ಆಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೋಗುವಾಗ ಯಡಿಯೂರಪ್ಪ ಅವರ ವಯಸ್ಸು ತಿಳಿದಿರಲಿಲ್ಲವೇ ? ಬಿಜೆಪಿ, ಜೆಡಿಎಸ್ ವಿರುದ್ದ ಕುಟುಂಬ ರಾಜಕಾರಣದ ಆರೋಪ ಮಾಡಿರುವ ವಿಶ್ವನಾಥ್ ಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಅವರ ಪುತ್ರ ಕೂಡ ಜಿಲ್ಲಾ ಪಂಚಾಯತ್ ಸದಸ್ಯ. ಅವರು ಕೂಡ ಕುಟುಂಬ ರಾಜಕಾರಣದಲ್ಲಿದ್ದಾರೆ. ಅಧಿಕಾರ ಸಿಗದೇ ಇದ್ದಾಗ ಬೈಕುಕೊಂಡು ಓಡಾಡೋದು ವಿಶ್ವನಾಥ್ ಅವರ ಬುದ್ದಿ ಆರೋಪಿಸಿದ್ದಾರೆ.