ಮೈಸೂರು : ಕಳೆದೊಂದು ವಾರದಿಂದಲೂ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಕೆ.ಆರ್.ಎಸ್ ಡ್ಯಾಂ ಬಿರುಕು ವಿಚಾರ ಇದೀಗ ತಿರುವು ಪಡೆದುಕೊಂಡಿದೆ. ಖುದ್ದು ಸಂಸದೆ ಸುಮಲತಾ ಅವರೇ ತಾನು ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ. ಬದಲಾಗಿ ಬಿರುಕು ಬಿಟ್ಟಿದ್ಯಾ ಅನ್ನೋ ಆತಂಕ ವ್ಯಕ್ತಪಡಿಸಿದ್ದೇನೆ ಎನ್ನುವ ಮೂಲಕ ವಿವಾದದಲ್ಲಿ ಯೂಟರ್ನ್ ಹೊಡೆದಿದ್ದಾರೆ.

ಕೆಆರ್‌ಎಸ್ ವಿಚಾರದಲ್ಲಿ ಸಂಸದೆ ಸುಮಲತಾ ನೀಡಿದ್ದ ಹೇಳಿಕೆ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ವೈಯಕ್ತಿಕ ಸಂಘರ್ಷಕ್ಕೂ ಕಾರಣವಾಗಿತ್ತು. ಕಳೆದ ಒಂದು ವಾರದಿಂದಲೂ ಎರಡೂ ಕಡೆಯಿಂದ ಪರಸ್ಪರ ಆರೋಪ, ಪ್ರತ್ಯಾರೋಪ, ಪ್ರತಿಭಟನೆಯೇ ಕಂಡು ಬಂದಿತ್ತು. ಆದ್ರೀಗ ಸಂಸದೆ ಸುಮಲತಾ ಅವರು, ತಮ್ಮ ಹೇಳಿಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಯಿಸಲಾಗುತ್ತಿದೆ ಎಂದಿದ್ದಾರೆ.

ನಾನು ಕೆ.ಆರ್.ಎಸ್. ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ, ಬದಲಾಗಿ ಸಭೆಯಲ್ಲಿ ಬಿರುಕು ಬಿಟ್ಟಿದ್ಯಾ ಎಂದು ಪ್ರಶ್ನಿಸಿದ್ದೆ. ಅಲ್ಲದೇ ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಬಿರುಕು ಬಿಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದೆ. ಆದರೆ ಕೆಆರ್‌ಎಸ್ ಬಗೆಗೆ ತನಗಿರುವ ಆತಂಕವನ್ನು ಬೇರೆ ರೀತಿಯಲ್ಲಿ ಅರ್ಥೈಯಿಸಿ ರಾದ್ದಾಂತ ಮಾಡಲಾಗುತ್ತಿದೆ ಎಂದಿದ್ದಾರೆ.

ಇನ್ನು ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯತ್ತಿದೆ ಎಂದು ಹೇಳಿದ್ದೇನೆ. ಅಲ್ಲದೇ ಅಕ್ರಮ ಗಣಿಗಾರಿಕೆ ಯನ್ನು ಬಯಲಿಗೆ ತರಲು ಪ್ರಯತ್ನಿಸುತ್ತಿದ್ದೇನೆ. ಕೆಆರ್‌ಎಸ್ ಡ್ಯಾಮ್ ಸುತ್ತಲೂ ಸ್ಪೋಟ ಮಾಡುವಂತೆ ಇಲ್ಲ. ಹೀಗಾಗಿ ಡ್ಯಾಂ ಸಮೀಪದ ಪ್ರದೇಶದಲ್ಲಿ ಅಕ್ರಮ ಸಕ್ರಮದ ಪ್ರಶ್ನೆಯೇ ಇಲ್ಲ. ಈ ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಡ್ಯಾಂ ನಲ್ಲಿ ಕಂಪನ ಆಗಿದೆ ಅನ್ನೋ ಕುರಿತು ಅಧಿಕೃತ ದಾಖಲೆಗಳು ಇವೆ. ಹೀಗಾಗಿ ಈ ಕುರಿತು ತನಿಖೆ ನಡೆಯೇ ಬೇಕೆಂದು ಆಗ್ರಹಿಸಿದ್ದಾರೆ.