ಬೆಂಗಳೂರು : legislative council election list : ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯದಿನವಾಗಿರುವ ಹಿನ್ನೆಲೆಯಲ್ಲಿ ಕೊನೆಗೂ ಬಿಜೆಪಿ ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ಜಾತಿವಾರು ಆಧಾರದಲ್ಲಿ ಬಿಜೆಪಿಯು ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್, ಹೇಮಲತಾ ನಾಯಕ್, ಬಸರವಾಜ ಹೊರಟ್ಟಿ ಹಾಗೂ ಲಕ್ಷ್ಮಣ ಸವದಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಪಶ್ಚಿಮ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಕಣಕ್ಕಿಳಿಯಲಿದ್ದಾರೆ.
ಹಿಂದುಳಿದ ವರ್ಗಗಳ ಕೋಟಾದ ಅಡಿಯಲ್ಲಿ ಕೇಶವ ಪ್ರಸಾದ್ಗೆ ಈ ಬಾರಿ ಬಿಜೆಪಿಯು ಎಂಎಲ್ಸಿ ಟಿಕೆಟ್ ನೀಡಿದೆ. ವಿಧಾನ ಪರಿಷತ್ ಚುನಾವಣೆಗೆ ಈ ಬಾರಿಗೆ ಕೇಶವ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ಅನೇಕ ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇತ್ತು. ರಾಜ್ಯ ಬಿಜೆಪಿಯ ಕಾರ್ಯಲಯ ಕಾರ್ಯದರ್ಶಿಯಾಗಿರುವ ಕೇಶವ ಪ್ರಸಾದ್ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕೆಲವು ವಾರಗಳ ಹಿಂದೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ ವೇಳೆಯಲ್ಲಿ ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಹೊರಹಾಕಿದ್ದ ಬಸವರಾಜ ಹೊರಟ್ಟಿ ಬಳಿಕ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಹಾಗೂ ಪರಿಷತ್ ಸಭಾಪತಿ ಸ್ಥಾನಕ್ಕೆ ಕೆಲವು ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿಯಿಂದ ಇವರಿಗೆ ಟಿಕೆಟ್ ಫೈನಲ್ ಆಗಿದ್ದು ಇಂದು ಪಕ್ಷದಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಲಿದ್ದಾರೆ.
ಮಹಿಳಾ ಕೋಟಾದ ಅಡಿಯಲ್ಲಿ ಈ ಬಾರಿ ಬಿಜೆಪಿಯಿಂದ ಮಂಜುಳಾರಿಗೆ ಟಿಕೆಟ್ ನೀಡಲಾಗುತ್ತದೆ ಎಂದೇ ಹೇಳಲಾಗಿತ್ತು. ಬಿಜೆಪಿ ರೈತ ಮೋರ್ಛಾ ಉಪಾಧ್ಯಕ್ಷೆಯಾಗಿರುವ ಸಿ. ಮಂಜುಳಾ ಎಂಎಲ್ಸಿ ಟಿಕೆಟ್ ಸಿಗುತ್ತದೆಂದು ಬಿಜೆಪಿ ಕಚೇರಿಗೆ ಕೂಡ ಇಂದು ಆಗಮಿಸಿದ್ದರು. ಆದರೆ ಈ ಲೆಕ್ಕಾಚಾರ ಬುಡಮೇಲು ಮಾಡಿರುವ ಬಿಜೆಪಿ ಹೈಕಮಾಂಡ್ ಮಹಿಳಾ ಹಾಗೂ ನಾಯಕ ಕೋಟಾದಡಿಯಲ್ಲಿ ಹೇಮಲತಾ ನಾಯಕ್ರಿಗೆ ಟಿಕೆಟ್ ನೀಡಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಹೇಮಲತಾ ಇದೇ ಮೊದಲಬಾರಿಗೆ ಎಂಎಲ್ಸಿ ಚುನಾವಣೆ ಎದುರಿಸಲಿದ್ದಾರೆ.
ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಕಳೆದ ಅನೇಕ ದಿನಗಳಿಂದ ಎಂಎಲ್ಸಿ ಟಿಕೆಟ್ ರೇಸ್ನಲ್ಲಿ ಕೇಳಿ ಬಂದಿತ್ತು. ಅದರಂತೆಯೇ ಲಕ್ಷ್ಮಣ ಸವದಿಗೆ ಲಿಂಗಾಯತ ಕೋಟಾದಡಿಯಲ್ಲಿ ವಿಧಾನ ಪರಿಷತ್ ಚುನಾವಣಾ ಟಿಕೆಟ್ ಘೋಷಣೆಯಾಗಿದೆ.
ಜಾತಿ ಸಮೀಕರಣದಲ್ಲಿ ದಲಿತ ಕೋಟಾದಡಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಬಿಜೆಪಿಯಿಂದ ಎಂಎಲ್ಸಿ ಟಿಕೆಟ್ ಪಡೆದುಕೊಂಡಿದ್ದಾರೆ. ಈ ಮೊದಲು ಕಾಂಗ್ರೆಸ್ನಲ್ಲಿದ್ದ ಛಲವಾದಿ ಬಳಿಕ ಬಿಜೆಪಿ ಸೇರ್ಪಡೆಯಾಗಿ ಎಸ್ಸಿ ಮೋರ್ಚಾದ ಅಧ್ಯಕ್ಷರು ಕೂಡ ಆಗಿದ್ದಾರೆ. ಇವರು ಕೂಡ ಇದೇ ಮೊದಲ ಬಾರಿಗೆ ಪರಿಷತ್ ಚುನಾವಣೆ ಎದುರಿಸಲಿದ್ದಾರೆ.
ಈ ಬಾರಿ ವಿಧಾನಪರಿಷತ್ ಚುನಾವಣೆಗೆ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ವಿಜಯೇಂದ್ರರಿಗೆ ತೀವ್ರ ನಿರಾಶೆಯುಂಟು ಮಾಡಿರುವ ಬಿಜೆಪಿ ಹೈಕಮಾಂಡ್ ಇವರ ಹೆಸರನ್ನು ಕೈಬಿಟ್ಟಿದೆ. ಆದರೆ ಉನ್ನತ ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿಜಯೇಂದ್ರರನ್ನು ಪರಿಗಣಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್ ಶಾಕ್ : ಖ್ಯಾತ ಬೌಲರ್ ಹರ್ಷಲ್ ಪಟೇಲ್‌ಗೆ ಗಾಯ
ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್
legislative council election list of bjp candidates officially announced