Mekedatu Corona : ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್‌ ಗೂ ಕೊರೋನಾ : ಡಿಕೆಗೂ ನಡೀತು ಟೆಸ್ಟ್: ಸೂಪರ್ ಸ್ಪ್ರೆಡರ್ ಆಯ್ತಾ ಮೇಕೆದಾಟು ಪಾದಯಾತ್ರೆ

ಬೆಂಗಳೂರು : ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿರೋ ಕಾಂಗ್ರೆಸ್ ಪಾದಯಾತ್ರೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಯಾವುದೇ ಕ್ಷಣದಲ್ಲೂ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಬಹುದು ಅಥವಾ ಸರ್ಕಾರ ಬಲವಂತವಾಗಿ ಪಾದಯಾತ್ರೆ ತಡೆಯಬಹುದು. ಆದರೆ ಈ ಎಲ್ಲ ಬೆಳವಣಿಗಳಿಗಿಂತ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರಿಗೇ ಒಬ್ಬೊಬ್ಬರಿಗೆ ಕೊರೋನಾ (Mekedatu Corona) ಕಾಣಿಸಿಕೊಳ್ಳಲಾರಂಭಿಸಿದೆ.

ನಮ್ಮಿಂದ ಕರೋನಾ ಹರಡುತ್ತಿಲ್ಲ.‌ನಾವು ಕೊರೋನಾ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಸರ್ಕಾರ ಸುಳ್ಳು ಅಂಕಿಅಂಶ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಪಾದಯಾತ್ರೆಯುದ್ದಕ್ಕೂ ಬಡಬಡಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಸತ್ಯವೊಂದು ಬಯಲಾಗುತ್ತಲೇ ಇದೆ. ಈಗಾಗಲೇ ಕಾಂಗ್ರೆಸ್ ಪಾದಯಾತ್ರೆಯ ಮೊದಲ ದಿನ ಪಾಲ್ಗೊಂಡಿದ್ದ ಚಿಕ್ಕಬಳ್ಳಾಪುರದ ಗೌರಿಬಿದನೂರು ಶಾಸಕ ಶಿವಶಂಕರ್‌ರೆಡ್ಡಿಗೆ ಕೊರೋನಾ ಒಕ್ಕರಿಸಿದೆ.

ಇದರ ಬೆನ್ನಲ್ಲೆ ಪಾದಯಾತ್ರೆ ಉದ್ಘಾಟನೆ ವೇಳೆ ಡಿಕೆಶಿ ಜೊತೆಗೆ ಹೆಜ್ಜೆ ಹಾಕಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೂ ಕೊರೋನಾ ಪಾಸಿಟಿವ್ ಆಗಿದ್ದು, ತೀವ್ರ ಜ್ವರದಿಂದ ಬಳಲುತ್ತಿರುವ ಖರ್ಗೆ ಮನೆಯಲ್ಲೇ ಐಸೋಲೇಟ್ ಆಗಿ‌ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದ ಬಹುತೇಕ ಮಹಿಳಾ ಶಾಸಕಿಯರು ಕೊರೋನಾ ಗೆ ತುತ್ತಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು ಕೊರೋನಾ ಟೆಸ್ಟ್ ಪಾಸಿಟಿವ್ ಆಗಿದೆ.

ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸಿದ ಬಹುತೇಕ ನಾಯಕಿಯರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಮ್ಯಾಂಗೋ ಬೋರ್ಡ್ ಮಾಜಿ ಅಧ್ಯಕ್ಷೆ ಎಐಸಿಸಿ ಕಾರ್ಯದರ್ಶಿ ಕಮಲಾಕ್ಷಿ ರಾಜಣ್ಣ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಗೆ ಕೋವಿಡ್ ಕಾಣಿಸಿಕೊಂಡಿದೆ. ಈ ಎಲ್ಲ ನಾಯಕಿಯರು ಪಾದಯಾತ್ರೆಯಲ್ಲಿ ನೂರಾರು ಜನರೊಂದಿಗೆ ಹೆಜ್ಜೆ ಹಾಕಿದ್ದರು. ಅಲ್ಲದೇ ನೂರಾರು ಜನರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಕೊರೋನಾ‌ ಕಾಣಿಸಿಕೊಳ್ಳುತ್ತಿದ್ದಂತೆ ಈಗ ಈ ನಾಯಕಿಯರುಸದ್ಯ ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ರಾಮನಗರ ಸರ್ಕಾರಿ ಆಸ್ಪತ್ರೆ ವೈದ್ಯರು ಮುಂಜಾನೆ ಡಿಕೆಶಿ ನಿವಾಸಕ್ಕೆ ಆಗಮಿಸಿ ಕೊರೋನಾ ಪರೀಕ್ಷೆಗಾಗಿ ಸ್ಯಾಂಪಲ್ ಸಂಗ್ರಹಿಸಿ ಕೊಂಡೊಯ್ದಿದ್ದಾರೆ‌. ಒಟ್ಟಿನಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದ ಮೇಕೆದಾಟು ಪಾದಯಾತ್ರೆ ಕೊರೋನಾ ಸೂಪರ್ ಸ್ಪ್ರೆಡರ್ ಆಗಬಹುದೆಂಬ ಸರ್ಕಾರದ ಆತಂಕ ಈಗ ನಿಜವಾಗೂ ಮುನ್ಸೂಚನೆ ಲಭ್ಯವಾಗಿದೆ.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ : ಸರಕಾರದ ಅಧಿಕೃತ ಆದೇಶ

ಇದನ್ನೂ ಓದಿ : ಭಾರತದಲ್ಲಿ ಕೋವಿಡ್‌ ಆರ್ಭಟ : ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲಾ ಸಿಎಂಗಳ ಜೊತೆ ತುರ್ತು ಸಭೆ

(Mallikarjun Kharge and Lakshmi Hebbalkar to corona kpcc president dk Sivakumar also corona test, mekedatu hiking Super Spreader)

Comments are closed.