MLC Election : ಆಪ್ತರ ಟಿಕೆಟ್‌ಗಾಗಿ ನಾಯಕರಿಂದ ಲಾಭಿ : ಕರಾವಳಿಯಲ್ಲಿ ಕೈ ಕಾರ್ಯಕರ್ತರ ಪರ ಒಲವು ತೋರುತ್ತಾ ಹೈಕಮಾಂಡ್‌

ಮಂಗಳೂರು : ಕರಾವಳಿಯಲ್ಲಿ ವಿಧಾನ ಪರಿಷತ್‌ ಚುನಾವಣೆಯ (MLC Election) ಕಾವು ಹೆಚ್ಚುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಂದೆಡೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಹುಡುಕಾಟದಲ್ಲಿಯೇ ಮಗ್ನವಾಗಿದೆ. ಈ ನಡುವಲ್ಲೇ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ, ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ ಲಾಭಿ ಮುಂದುವರಿಸಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿಯಾದ್ರೂ ಕಾರ್ಯಕರ್ತರ ಪರ ಒಲವು ತೋರುತ್ತಾ ಅನ್ನೋ ಪ್ರಶ್ನೆ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್‌ ವಿಧಾನ ಪರಿಷತ್‌ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಲೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಲಾಭಿ ಮುಂದುವರಿದಿದೆ. ಕಾಂಗ್ರೆಸ್‌ನಲ್ಲಿ ಶಶಿಧರ ಹೆಗ್ಡೆ, ಪಿ.ವಿ.ಮೋಹನ್‌, ಭುಜಂಗ ಶೆಟ್ಟಿ, ಐವನ್‌ ಡಿಸೋಜಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಜೇಂದ್ರ ಕುಮಾರ್‌ ಪರ ಒಲವು ತೋರುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಮುನಿಸಿಕೊಂಡಿದ್ದರು. ರಾಜೇಂದ್ರ ಕುಮಾರ್‌ ಬದಲು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ಕೊಡುವಂತೆ ಪಟ್ಟು ಹಿಡಿದಿದ್ರು. ಕೊನೆಗೂ ರಾಜೇಂದ್ರ ಕುಮಾರ್‌ ಚುನಾವಣಾ ಕಣದಿಂದಲೇ ಹಿಂದೆ ಸರಿದಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪ್ರಮುಖವಾಗಿ ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌ ಅವರ ಪರ ಎಐಸಿಸಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಲಾಭಿ ನಡೆಸುತ್ತಿದ್ದಾರೆ. ಕೇರಳಿಗರು ಅನ್ನೋ ವ್ಯಾಮೋಹದ ಹಿನ್ನೆಲೆಯಲ್ಲೀ ಈ ಲಾಭಿ ನಡೆಯುತ್ತಿದೆ. ಕಳೆದ ಮಹಾನಗರ ಪಾಲಿಕೆ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸದವರಿಗೆ ವಿಧಾನ ಪರಿಷತ್‌ ಚುನಾವಣೆಯ ಟಿಕೆಟ್‌ ನೀಡುವುದು ಸರಿಯೇ ಅಂತಾನೂ ಪ್ರಶ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಕರಾವಳಿ ಭಾಗದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಲಾಭಿ ಶುರುವಿಟ್ಟುಕೊಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಮಂಜುನಾಥ ಭಂಡಾರಿ ಅವರು ಈ ಬಾರಿ ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಶತಾಯಗತಾಯ ತಮ್ಮ ಶಿಷ್ಯ ಮಂಜುನಾಥ ಭಂಡಾರಿ ಅವರಿಗೆ ಟಿಕೆಟ್‌ ಕೊಡಿಸಲು ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ ವಲಯದಲ್ಲಿ ಲಾಭಿ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಪರ ಸಿದ್ದರಾಮಯ್ಯ ಬ್ಯಾಟಿಂಗ್‌ ನಡೆಸಿದ್ದಾರೆ. ಇನ್ನೊಂದೆಡೆಯಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅವರಿಂದ ತೆರವಾಗಿರುವ ರಾಜ್ಯಸಭಾ ಸದಸ್ಯರ ಹುದ್ದೆಯ ಮೇಲೆಯೂ ಐವನ್‌ ಕಣ್ಣೀಟ್ಟಿದ್ದಾರೆ. ಜೊತೆಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಿದ್ದರಾಮಯ್ಯ ಸೈಲೆಂಟ್‌ ಆಗಿದ್ದಾರೆ ಎನ್ನಲಾಗುತ್ತಿದೆ.

ಉಡುಪಿಯಿಂದ ಈಗಾಗಲೇ ಭುಜಂಗ ಶೆಟ್ಟಿ ಅವರು ಈ ಬಾರಿ ವಿಧಾನ ಪರಿಷತ್‌ ಚುನಾವಣಾ ಕಣದಕ್ಕೆ ಧುಮುಕುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ಭುಜಂಗ ಶೆಟ್ಟಿ ಅವರ ಪರ ವಿನಯ ಕುಮಾರ್‌ ಸೊರಕೆ ಸೇರಿದಂತೆ ಉಡುಪಿ ಕಾಂಗ್ರೆಸ್‌ ನಾಯಕರ ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಲಾಭಿ ನಡೆಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಎಂ.ಎನ್.ರಾಜೇಂದ್ರ ಕುಮಾರ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭುಜಂಗ ಶೆಟ್ಟಿ ಅವರ ಪರ ಒಲವು ಹೊಂದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಆದರೆ ಕಾಂಗ್ರೆಸ್‌ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರೋದು ಕಾರ್ಪೋರೇಟರ್‌ ಶಶಿಧರ್‌ ಹೆಗ್ಡೆ ಅವರ ಹೆಸರು. ಐದು ಬಾರಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ ಆಗಿ, ಮೇಯರ್‌ ಆಗಿ ಕೆಲಸ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ಕ್ಲೀನ್‌ ಹ್ಯಾಂಡ್‌ ಜೊತೆಗೆ ಪಕ್ಷದ ಕಾರ್ಯಕರ್ತರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಶಶಿಧರ ಹೆಗ್ಡೆ ಅವರಿಗೆ ಟಿಕೆಟ್‌ ನೀಡುವಂತೆ ಕೈ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಕಳೆದ ಕೆಲವು ವರ್ಷಗಳಿಂದಲೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಹಿನ್ನಡೆ ಅನುಭವಿಸಿದೆ. ಇನ್ನೊಂದೆಡೆಯಲ್ಲಿ ಹಿರಿಯ ಕಾಂಗ್ರೆಸ್‌ ನಾಯಕರನ್ನು ರಾಜ್ಯ, ರಾಷ್ಟ್ರೀಯ ನಾಯಕರು ಮೂಲೆಗೆ ಸರಿಸಿದ್ದಾರೆ. ಜೊತೆಗೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾರ್ಯಕರ್ತರ ಮಾತಿಗೆ ಬೆಲೆ ಕೊಡದೆ ತಕ್ಕ ಶಾಸ್ತಿ ಅನುಭವಿಸಿದೆ. ಹೀಗಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಾದ್ರೂ ಕಾರ್ಯಕರ್ತರ ನೆಚ್ಚಿನ ಅಭ್ಯರ್ಥಿಗೆ ಟಿಕೆಟ್‌ ಕೊಡಲಿ ಅನ್ನೋ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ : Ramya : ಮತ್ತೊಮ್ಮೆ ಬಿಜೆಪಿ ಕುಟುಕಿದ ಪದ್ಮಾವತಿ : ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಪಾಠ

ಇದನ್ನೂ ಓದಿ : Bitcoin : ಸಿಎಂ ಬೊಮ್ಮಾಯಿ ವಿರುದ್ದ ಬಿಟ್‌ಕಾಯಿನ್‌ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್‌ : ಹಗರಣ ಬಿಚ್ಚಿಟ್ಟ ಸುರ್ಜೇವಾಲ

( Hands of leaders to issue tickets for MLC Election in Mangalore )

Comments are closed.