ಭಾನುವಾರ, ಏಪ್ರಿಲ್ 27, 2025
HomekarnatakaNadoja Dr G Shankar : ವಿಧಾನ ಪರಿಷತ್‌ಗೆ ನಾಡೋಜಾ ಡಾ.ಜಿ.ಶಂಕರ್‌ ?

Nadoja Dr G Shankar : ವಿಧಾನ ಪರಿಷತ್‌ಗೆ ನಾಡೋಜಾ ಡಾ.ಜಿ.ಶಂಕರ್‌ ?

- Advertisement -

ಉಡುಪಿ : Nadoja Dr G Shankar : ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಪರ ಅಲೆ ಇದ್ದರೂ ಕೂಡ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಅದ್ರಲ್ಲೂ ಉಡುಪಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಪಕ್ಷ ಕರಾವಳಿ ಭಾಗದ ಮತದಾರರನ್ನು ತನ್ನತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪ್ರಭಾವಿ ಮೊಗವೀರ ಮುಖಂಡ, ಸಮಾಜ ಸೇವಕ ನಾಡೋಜಾ ಡಾ.ಜಿ. ಶಂಕರ್‌ ಅವರನ್ನು ರಾಜಕೀಯಕ್ಕೆ ಕರೆತರಲು ತೆರೆಮರೆಯಲ್ಲೇ ಕಸರತ್ತು ನಡೆಯುತ್ತಿದ್ದು, ವಿಧಾನ ಪರಿಷತ್‌ಗೆ ಜಿ.ಶಂಕರ್‌ ಆಯ್ಕೆಯಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

ಉಡುಪಿ ಮೂಲದವರಾಗಿರುವ ಡಾ.ಜಿ.ಶಂಕರ್‌ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ. ಡಾ.ಜಿ.ಶಂಕರ್‌ (Nadoja Dr G Shankar ) ಅವರು ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮೂಲಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಮೊಗವೀರ ಯುವ ಸಂಘಟನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೊಗವೀರ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಡಾ.ಜಿ.ಶಂಕರ್‌ ಸರಕಾರದ ಗಮನ ಸೆಳೆದು ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿಯೂ ಶ್ರಮಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದರೂ ಕೂಡ ತನ್ನ ಆದಾಯದಲ್ಲಿ ಒಂದಿಷ್ಟು ಹಣವನ್ನು ಜನರಿಗೆ ವಿನಿಯೋಗಿಸುವ ಸಲುವಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಕರಾವಳಿ ಕರ್ನಾಟಕದಲ್ಲಿ ಹಳಿಯಾಳ, ಕಾರವಾರ, ಭಟ್ಕಳ, ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಕಾಂಗ್ರೆಸ್‌ ಶಾಸಕರಿದ್ದಾರೆ. ಒಂದು ಕಾಲದಲ್ಲಿ ಉಡುಪಿ ಜಿಲ್ಲೆ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿತ್ತು. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದರು. ಇನ್ನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಮೊಗವೀರ ಸಮುದಾಯದವರೇ ಶಾಸಕರಾಗಿದ್ದಾರೆ. ಮಧ್ವರಾಜ್‌, ಮನೋರಮಾ ಮಧ್ವರಾಜ್‌, ಯು.ಆರ್.ಸಭಾಪತಿ, ಪ್ರಮೋದ್‌ ಮಧ್ವರಾಜ್‌ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಆದರೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಬಿಜೆಪಿಯ ತೆಕ್ಕೆಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಜೊತೆಗೆ ತಾಲೂಕು ಪಂಚಾಯತ್‌ ಚುನಾವಣೆ, ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ಹೀಗಾಗಿಯೇ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸಲು ಜಿಲ್ಲೆಯಿಂದ ಒಬ್ಬರಿಗೆ ಸಚಿವ ಸ್ಥಾನ ಇಲ್ಲಾ, ವಿಧಾನ ಪರಿಷತ್‌ ಗೆ ಆಯ್ಕೆ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಹೀಗೆ ಆಯ್ಕೆ ಆಗುವವರಿಗೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿರಬೇಕು. ಕರಾವಳಿ ಜಿಲ್ಲೆಗಳಲ್ಲಿನ ಪಕ್ಷ ಸಂಘಟನೆಗೆ ಡಾ.ಜಿ.ಶಂಕರ್‌ ಅವರೇ ಸೂಕ್ತ ಅನ್ನೋ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ.

ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಕಾಪು ವಿಧಾನ ಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಗವೀರ ಸಮುದಾಯದ ಮತದಾರರಿದ್ದಾರೆ. ಪ್ರತೀ ಚುನಾವಣೆ ಅಲ್ಲಿಯೂ ಅಭ್ಯರ್ಥಿಗಳ ಗೆಲುವಿನಲ್ಲಿ ಮೊಗವೀರರೇ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ. ಆದರೆ ಮೊಗವೀರ ಮತಗಳನ್ನು ಕಾಂಗ್ರೆಸ್‌ ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಪಕ್ಷದಲ್ಲಿ ಸಮರ್ಥ ಮೊಗವೀರ ನಾಯಕರಿಲ್ಲ. ಇದೇ ಕಾರಣಕ್ಕೆ ಜಿ.ಶಂಕರ್‌ ಅವರನ್ನು ವಿಧಾನ ಪರಿಷತ್‌ ಗೆ ಆಯ್ಕೆ ಮಾಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನೆರವಾಗಬಹುದು ಅನ್ನೋದು ಕಾಂಗ್ರೆಸ್‌ ಲೆಕ್ಕಾಚಾರ. ಅಲ್ಲದೇ ವಿಧಾನ ಪರಿಷತ್‌ ಗೆ ಆಯ್ಕೆಯಾದ ನಂತರದಲ್ಲಿ ಸಚಿವ ಸ್ಥಾನವೂ ದೊರೆಯಬಹುದು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ಜಿ.ಶಂಕರ್‌ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿಯೂ ಪ್ರಾಬಲ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಮೊಗವೀರ, ಕೋಳಿ, ಕಬ್ಬಲಿಗ, ಅಂಬಿಗ, ಬೆಸ್ತ ಸೇರಿದಂತೆ ಒಟ್ಟು ಮೀನುಗಾರರ 39 ಉಪ ಜಾತಿಗಳಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮೀನುಗಾರರಿದ್ದಾರೆ. ಈ ಎಲ್ಲಾ ಮೀನುಗಾರರ ಸಮಯದಾಯದ ಜೊತೆಗೂ ಜಿ.ಶಂಕರ್‌ ನಿಕಟ ಸಂಬಂಧವನ್ನು ಇರಿಸಿಕೊಂಡಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ ಕಾಂಗ್ರೆಸ್‌ ಪಕ್ಷದಿಂದ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರವೇ ನೀಡಲಾಗುತ್ತಿದೆ. ಇದೀಗ ವಿಧಾನ ಪರಿಷತ್‌ಗೆ ಜಿ.ಶಂಕರ್‌ ಅವರನ್ನು ಆಯ್ಕೆ ಮಾಡುವ ಮೂಲಕ ಮೊಗವೀರ ಸಮುದಾಯದ ಮತಗಳನ್ನು ಸೆಳೆಯುವ ಲೆಕ್ಕಾಚಾರವನ್ನು ಕೈ ನಾಯಕರು ಮಾಡುತ್ತಿದ್ದಾರೆ. ಇದನ್ನೂ ಓದಿ : Karnataka Cabinet 2023 : ಸಚಿವರ ಪ್ರಮಾಣ ವಚನದ ಬೆನ್ನಲ್ಲೇ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ

ಇನ್ನು ಮಾಜಿ ಶಾಸಕ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಜೊತೆಗೆ ಜಿ.ಶಂಕರ್‌ ನಿಕಟ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಬ್ರಹ್ಮಾವರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿಯೂ ಜಿ.ಶಂಕರ್‌ ಜಯಪ್ರಕಾಶ್‌ ಹೆಗ್ಡೆ ಅವರ ಗೆಲುವಿಗೆ ಶ್ರಮಿಸಿದ್ದರು. ಅಲ್ಲದೇ ಪ್ರತೀ ಚುನಾವಣೆಯಲ್ಲಿಯೂ ಜಯಪ್ರಕಾಶ್‌ ಹೆಗ್ಡೆ ಅವರನ್ನು ಬೆಂಬಲಿಸಿದ್ದರು. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಜೆಡಿಎಸ್‌ – ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಪ್ರಮೋದ್‌ ಮಧ್ವರಾಜ್‌ ಅವರ ಪರ ಕೆಲಸ ಮಾಡಿದ್ದರು. ಈ ಹಿಂದೆ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಮೀನುಗಾರಿಕಾ ಸಚಿವರಾಗಿದ್ದ ವೇಳೆಯಲ್ಲಿ ಮೀನುಗಾರರಿಗೆ ಡಿಸೇಲ್‌ ಸಬ್ಸಿಡಿ ಕೊಡಿಸುವಲ್ಲಿ ಶ್ರಮಿಸಿದ್ದರು. ಇದೀಗ ಜಯಪ್ರಕಾಶ್‌ ಹೆಗ್ಡೆ ಅವರೇ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಜಿ.ಶಂಕರ್‌ ಕಾಂಗ್ರೆಸ್‌ ಕೈ ಹಿಡಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : Congress five guarantee : ಮುಂದಿನ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಜಾರಿ : ಸಿಎಂ ಸಿದ್ದರಾಮಯ್ಯ

ಈಗಾಗಲೇ ಕಾಂಗ್ರೆಸ್‌ ನಾಯಕರು ಜಿ.ಶಂಕರ್‌ ಅವರನ್ನು ಸಂಪರ್ಕಿಸಿ ಆಫರ್‌ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೇ ರಾಜಕೀಯದ ಆಹ್ವಾನ ಬಂದಾಗಲೂ ಜಿ.ಶಂಕರ್‌ ನಯವಾಗಿಯೇ ತಿರಸ್ಕರಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಜಿ.ಶಂಕರ್‌ ಅವರ ಹೆಸರು ವಿಧಾನ ಪರಿಷತ್‌ಗೆ ಬಲವಾಗಿ ಕೇಳಿಬರುತ್ತಿದೆ. ಈ ಬಾರಿ ರಾಜಕೀಯದ ಆಫರ್‌ ಒಪ್ಪಿಕೊಳ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

MLC Nadoja Dr G Shankar may be Appointed as Member of Legislative Council in congress party

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular