ನವದೆಹಲಿ: ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಜನರಾಗಿದ್ದಾರೆ.

ಬಿಜೆಪಿ ಪಕ್ಷದಿಂದ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ 6 ವರ್ಷ 64 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿ ಸೇರಿದಂತೆ ಆರು ವರ್ಷ 79 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರ ಮಗಳು ಇಂದಿರಾ ಗಾಂಧಿ ಕ್ರಮವಾಗಿ 11 ವರ್ಷಗಳು ಮತ್ತು ಸುಮಾರು ನಾಲ್ಕುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಡಾ. ಮನಮೋಹನ್ ಸಿಂಗ್ ಅವರು ತಲಾ ಐದು ವರ್ಷಗಳ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು.
ನರೇಂದ್ರ ಮೋದಿ ಅವರು 2014 ರ ಮೇ 26 ರಂದು ದೇಶದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2019 ರ ಮೇ 30 ರಂದು ಪ್ರಧಾನ ಮಂತ್ರಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು.

ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಇತರ ಕಾಂಗ್ರೆಸ್ಸೇತರ ಪ್ರಧಾನಿಗಳ ಅಂದರೆ ಮೊರಾರ್ಜಿ ದೇಸಾಯಿ (1977ರ ಮಾರ್ಚ್ 24ರಿಂದ 1979ರ ಜುಲೈ 28) ಚರಣ್ ಸಿಂಗ್ (1979ರ ಜುಲೈ 28ರಿಂದ 1980ರ ಜನವರಿ 14), ವಿಶ್ವನಾಥ್ ಪ್ರತಾಪ್ ಸಿಂಗ್(1989ರ ಡಿಸೆಂಬರ್ 2ರಿಂದ 1991ರ ಜೂನ್ 21), ಎಚ್ ಡಿ ದೇವೇಗೌಡ (1996ರ ಜೂನ್ 1ರಿಂದ 1997ರ ಏಪ್ರಿಲ್ 21), ಇಂದ್ರಕುಮಾರ್ ಗುಜ್ರಾಲ್ (1997ರ ಏಪ್ರಿಲ್ 21ರಿಂದ 1998ರ ಮಾರ್ಚ್ 19).

ನರೇಂದ್ರ ಮೋದಿ ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಎರಡು ದಿನಗಳ ಮುನ್ನ ನಾಲ್ಕನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ.