ಬೆಂಗಳೂರು ಗಲಭೆ ಪ್ರಕರಣ : ಮಾಸ್ಟರ್​ ಮೈಂಡ್ ಕಲೀಲ್ ಪಾಷ ಬಂಧನ

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಡಿಜೆಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮಾಸ್ಟರ್ ಮೈಂಡ್ ಕಾರ್ಪೊರೇಟರ್ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷ ಎಂಬಾತನನ್ನು ಸಿಸಿಬಿ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯನ್ನು ಸಂಪೂರ್ಣ ಸುಟ್ಟುಹಾಕಲಾಗಿದ್ದು, ಪೊಲೀಸ್ ಠಾಣೆ ಹಾಗೂ ನೂರಾರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಪ್ರಕರಣದ ಬೆನ್ನಲ್ಲೇ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ 3 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲೀಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರ ವಿಶೇಷ ತಂಡ ಇದೀಗ ಕಾರ್ಪೋರೇಟರ್ ಪತಿಯನ್ನು ಬಂಧಿಸಿದ್ದಾರೆ.

ಬಿಬಿಎಂಪಿ ಪಾಲಿಕೆ ಸದಸ್ಯೆಯಾಗಿರುವ ಇರ್ಷಾದ್ ಬೇಗಮ್ ಪತಿ ಆರೋಪಿ ಕಲೀಂ ಗಲಾಟೆಗೂ ಮೊದಲೇ ಪೊಲೀಸ್ ಠಾಣೆ ಮುಂದೆ ಬಂದಿದ್ದ. ಅಲ್ಲಿ ಎಲ್ಲರನ್ನೂ ಪ್ರಚೋದಿಸಿದ್ದ. ಗಲಾಟೆ ಶುರುವಾಗ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದ. ಗಲಾಟೆ ಬಳಿಕ ಮತ್ತೆ ಠಾಣೆ ಬಳಿ ಬಂದು ಪೊಲೀಸರಿಗೆ ಸಹಕರಿಸುವಂತೆ ನಟಿಸಿದ್ದ. ತನಿಖೆ ವೇಳೆ ಘಟನೆಗೆ ಕಾರ್ಪೊರೇಟರ್ ಪತಿ ಪಾತ್ರ ಕಂಡು ಬಂದಿದ್ದ ಹಿನ್ನಲೆ ಬಂಧಿಸಲಾಗಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಬಂಧಿತರಾಗಿರುವ 89 ಮಂದಿ ಆರೋಪಿಗಳನ್ನು ರಾತ್ರೋರಾತ್ರಿ ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಬಸ್ಸುಗಳ ಮೂಲಕ ಸಿಸಿಬಿ ಹಾಗೂ ಕೆಎಸ್​ಆರ್​​ಪಿ ಭದ್ರತೆಯಲ್ಲಿ ಸ್ಥಳಾಂತರ ಮಾಡಲಾಗಿದೆ.

ಆರೋಪಿಗಳು ಬೆಂಗಳೂರಲ್ಲೇ ಇದ್ರೆ ಗಲಾಟೆ ಸಾಧ್ಯತೆ ಇರುವುದರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ 89 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

Leave A Reply

Your email address will not be published.