ಮೇಕೆದಾಟು ಪಾದಯಾತ್ರೆಗೆ ಮತ್ತೆ ಚಾಲನೆ : ಡಿಕೆಶಿ, ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು : ಈಗಾಗಲೇ ಈಶ್ವರಪ್ಪ ವಿರುದ್ಧ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ತಲೆನೋವಾಗಿರುವ ಕಾಂಗ್ರೆಸ್ ಇದೇ ಬಿಸಿಯಲ್ಲಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಿದೆ. ಕೊರೋನಾ ಮೂರನೆ ಅಲೆಯ ಕಾರಣಕ್ಕೆ ನಿಲ್ಲಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು(Mekedaatu Padayathra) ಫೆ.27 ರಿಂದ ಆರಂಭಿಸುವುದಾಗಿ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಪಾದಯಾತ್ರೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಡಿಕೆಶಿ, ಫೆ.27 ಕ್ಕೆ ಮೇಕೆದಾಟು ಪಾದಯಾತ್ರೆ ಪುನರಾರಂಭಗೊಳ್ಳುತ್ತಿದ್ದು ರಾಮನಗರದಿಂದ ಬೆಂಗಳೂರಿನವರೆಗೂ ಉಳಿದ 6 ದಿನಗಳ ಪಾದಯಾತ್ರೆ ನಡೆಯಲಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೇಕೆದಾಟು ಪಾದಯಾತ್ರೆ ಆಯೋಜಿಸಿತ್ತು. ಅಭೂತಪೂರ್ವ ಯಶಸ್ಸಿನೊಂದಿಗೆ ಆರಂಭಗೊಂಡಿದ್ದ ಪಾದಯಾತ್ರೆಗೆ ಕೊರೋನಾ ಅಡ್ಡಿಯಾಗಿತ್ತು. ಹೀಗಾಗಿ ಪಾದಯಾತ್ರೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಮನಗರಕ್ಕೆ ಕೊನೆಗೊಂಡಿತ್ತು. ರಾಮನಗರ ಮಾರ್ಗವಾಗಿ ಬೆಂಗಳೂರಿಗೆ ತಲುಪಿ, ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ನಡೆಯಬೇಕಿದ್ದ ಸಮಾರೋಪ ಸಮಾರಂಭ ಕೊರೋನಾದಿಂದ ರದ್ದಾಗಿತ್ತು.

ಆದರೆ ಸರ್ಕಾರ ವಿನಾಕಾರಣ ಕಿರುಕುಳ ನೀಡಿ ಪಾದಯಾತ್ರೆ ನಿಲ್ಲಿಸುತ್ತಿದೆ ಎಂದು ಆರೋಪಿಸಿದ್ದ ಡಿಕೆಶಿ, ಪಾದಯಾತ್ರೆ ನಿಲ್ಲಿಸುವ ವೇಳೆಯೂ ಇದು ತಾತ್ಕಾಲಿಕ ತಡೆ. ನಾವು ಪಾದಯಾತ್ರೆ ನಡೆಸಿಯೇ ಸಿದ್ಧ ಎಂದಿದ್ದರು. ಕೊಟ್ಟ ಮಾತಿನಂತೆ ಪಾದಯಾತ್ರೆಗೆ ಕೈ ಪಡೆ ಸಜ್ಜಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಮಾಜಿಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ಧರಾಮಯ್ಯ, ಕೊರೋನಾ ಗೈಡ್ ಲೈನ್ಸ್ ನಿಂದ ಹಾಗೂ ನಮ್ಮಿಂದ ರೋಗ ಹೆಚ್ಚಾಗಬಾರದು ಎಂಬ ಕಾರಣಕ್ಕೆ ಪಾದಯಾತ್ರೆ ನಿಲ್ಲಿಸಿದ್ದೇವು. ಈಗ ಮತ್ತೆ ರಾಮನಗರದಿಂದ ಪಾದಯಾತ್ರೆ ಆರಂಭಿಸುತ್ತೇವೆ.

ಐದು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ರಾಮನಗರದಿಂದಲೇ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ಕೊನೆಯ ದಿನ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ಮಾಡ್ತಿವಿ. ಮೇಕೆದಾಟು ಬಳಿಕ ನಮ್ಮದು ಮಹದಾಯಿಗಾಗಿಯೂ ಹೋರಾಟ ನಡೆಯಲಿದೆ. ಕಾಂಗ್ರೆಸ್ ಎಲ್ಲವನ್ನು ಸಾಮೂಹಿಕ ನಾಯಕತ್ವದ ಅಡಿಯಲ್ಲೇ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಡಿಕೆಶಿ ಮುನ್ನುಡಿ ಬರೆದಿದ್ದು, ಶತಾಯ ಗತಾಯ ಮುಗಿಸಲೇ ಬೇಕೆಂದು ಪಟ್ಟು ಹಿಡಿದು ಕಾರ್ಯರೂಪಕ್ಕೆ ತರುತ್ತಿದ್ದಾರೆ‌. ಈ ಪಾದಯಾತ್ರೆಯಿಂದ ಬಿಜೆಪಿ ಇಮೇಜ್ ಕುಗ್ಗುವ ಸಾಧ್ಯತೆ ಇರೋದರಿಂದ ಬಿಜೆಪಿ ನೇತೃತ್ವದ ಸರ್ಕಾರ ಪಾದಯಾತ್ರೆ ತಡೆಯಲು ಸರ್ಕಸ್ ಮತ್ತೆ ಆರಂಭಿಸೋ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?

ಇದನ್ನೂ ಓದಿ : ಬಿಜೆಪಿ ಗೂಡು ತೊರೆದ್ರಾ 20 ಶಾಸಕರು : ಸಿದ್ಧವಾಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್

(Drive back to Mekedaatu Padayathra KPCC President DK Shivakumar and Siddaramaiah announces).

Comments are closed.