ರಾಮನಗರ : ಜೆಡಿಎಸ್ ತೆರೆಮರೆಯಲ್ಲಿಯೇ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ರಾಜ್ಯದ 123 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲೀಗ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯ ಆವರಣದಲ್ಲಿ ಸಂಘಟನಾ ಕಾರ್ಯಾಗಾರ ನಡೆಯುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಚಾಲನೆ ನೀಡಿದರು.
ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ಕಾರ್ಯಾಗಾರದಲ್ಲಿ 123 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳ ಕಾಲ ಅವರ ಕಾರ್ಯಗಳನ್ನು ನೋಡಿದ ನಂತರದಲ್ಲಿ ಪಕ್ಷದ ಟಿಕೆಟ್ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಿಂದ ಶಕ್ತಿ ಪಡೆದುಕೊಂಡು ಬೇರೆ ಬೇರೆ ಪಕ್ಷಕ್ಕೆ ಹೋಗಿ ಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ಪಕ್ಷದಿಂದಲೇ ಬೆಳೆದ ನಾಯಕರೊಬ್ಬರು ನಮ್ಮ ಪಕ್ಷದ ವಿರುದ್ಧವೇ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ. ಮುಂದಿನ 17 ತಿಂಗಳು ನಿರಂತರವಾಗಿ ಪಕ್ಷದ ಸಂಘಟನಾ ಕಾರ್ಯಗಳು ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಪಕ್ಷದ ಚಟುವಟಿಕೆಗಳು ಇರಲಿಲ್ಲ. ಇಂದಿನಿಂದ ನಾಲ್ಕು ದಿನಗಳ ಕಾಲ ಕಾರ್ಯಗಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು. ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. ಅವರು ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದಿದ್ದಾರೆ.
ಇನ್ನು ಆತ್ಮೀಯತೆ ವ್ಯಾಮೋಹ ಅವರ ಮೇಲೆ ಇಲ್ಲ. ಅವರು ಕಾರ್ಯದಕ್ಷತೆಯಿಂದ ಇರಬೇಕು. ಇಲ್ಲವಾದ್ರೆ ಬದಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಕೆಲಸವನ್ನೂ ಮಾಡುತ್ತೇವೆ. ಬಡವರಿಗೆ ಕಾರ್ಯಕ್ರಮ ಕೊಟ್ಟ ಪಕ್ಷ ನಮ್ಮದು. ಕಾರ್ಯಗಾರ ಮಾಡಿ ನಂತರ ನಿರಂತರವಾಗಿ ಕಾರ್ಯಕ್ರಮ ನಡೆಸುತ್ತೇವೆ. ಮುಂಬರುವ ದಿನಗಳಲ್ಲಿ ಅಕಾರಕ್ಕೆ ಬರಲು ಶ್ರಮಿಸುತ್ತಿದ್ದೇವೆ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರೊಬ್ಬರು ಲಘುವಾಗಿ ಮಾತನ್ನಾಡುತ್ತಿದ್ದಾರೆ. ನಮ್ಮ ಪಕ್ಷ ಕುರಿತು ಕೇವಲವಾಗಿ ಮಾತನ್ನಾಡುತ್ತಿದ್ದಾರೆ ಎಂದು ಹೇಳಿದರು.
(JDS to run for election: HDD launches party organizing workshop)