Traffic Drive : ದಾಖಲೆ ಇಲ್ಲದೆ ವಾಹನ ರಸ್ತೆಗೆ ಇಳಿದ್ರೆ ಹುಷಾರ್‌ : ಸವಾರರ ಸುರಕ್ಷತೆಗೆ ಮಂಗಳೂರಲ್ಲಿ ಟ್ರಾಫಿಕ್‌ ಡ್ರೈವ್‌

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆ ಟ್ರಾಫಿಕ್‌ ಡ್ರೈವ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಒಂದು ವಾರಗಳ ಕಾಲ ನಡೆಯಲಿರುವ ಈ ಡ್ರೈವ್‌ ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಭಾರೀ ದಂಡ ಬೀಳುವುದು ಗ್ಯಾರಂಟಿ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕ್ರಮಕೈಗೊಳ್ಳುತ್ತಿದ್ದಾರೆ. ಆದರೂ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಯುತ್ತಿಲ್ಲ. ಇನ್ನೊಂದೆಡೆಯಲ್ಲಿ ವಾಹನದ ದಾಖಲೆಯಿಲ್ಲದೇ ಸಂಚಾರ, ಹೆಲ್ಮೆಟ್‌ ಇಲ್ಲದೇ ಬೈಕ್‌ ರೈಡಿಂಗ್‌, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೇ ಸಂಚಾರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ತಿಳಿಸಿದ್ದಾರೆ.

ಸೆಪ್ಟೆಂಬರ್‌ 27 ರಿಂದಲೇ ಈ ಡ್ರೈವ್‌ ಆರಂಭಗೊಂಡಿದ್ದು, ಅಕ್ಟೋಬರ್‌ 2ರ ವರೆಗೆ ನಡೆಯಲಿದೆ. ನಿತ್ಯವೂ ಸಂಚಾರಿ ನಿಯಮದಲ್ಲಿನ ಒಂದೊಂದು ವಿಷಯಗಳಿಗೆ ಆಧ್ಯತೆಯನ್ನು ನೀಡಲಾಗುತ್ತಿದೆ. ಇಂದು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ಟಿಂಟ್‌ ವಿರುದ್ದ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಸೆಪ್ಟೆಂಬರ್‌ 28ರಂದು ನಂಬರ್‌ ಪ್ಲೇಟ್‌ಗಳ ಕಾರ್ಯಾಚರಣೆ, ಸೆ.29 ರಂದು ಹೆಲ್ಮೆಟ್‌ ವಿರುದ್ದದ ಕಾರ್ಯಾಚರಣೆ ನಡೆಯಲಿದೆ.

ಇನ್ನು ಸೆ.30ರಂದು ವಾಹನಗಳ ಇನ್ಶುರೆನ್ಸ್‌ ತಪಾಸಣೆ ಕಾರ್ಯವನ್ನು ನಡೆಸಲಾಗುತ್ತಿದ್ದು, ಅ.1ರಂದು ಹಳೆಯ ಕೇಸ್‌ಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಇನ್ನು ಅಂತಿಮ ದಿನವಾದ ಅ.2 ರಂದು ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹೊಗೆ ತಪಾಸಣೆಯ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್‌, ಪಿಂಚಣಿ, ಡೆಬಿಟ್‌ ಕಾರ್ಡ್‌ ನಿಯಮ ಅರಿತುಕೊಳ್ಳಿ

ಇದನ್ನೂ ಓದಿ : ಕೋಟ : ನದಿಗೆ ಈಜಲು ತೆರಳಿದ್ದ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿ ಸಾವು

( One Week Traffic Drive in Mangalore City Police for safety of riders )

Comments are closed.