ಬೆಳಗಾವಿ : Satish Jarakiholi : ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋದಿಂದಾಗಿ ಉಂಟಾದ ಸಂಘರ್ಷದ ವಿಚಾರವಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕಿಡಬೇಕಿತ್ತು..? ಎಂದು ಪ್ರಶ್ನಿಸಿದ್ದರು. ಸಿದ್ದರಾಮಯ್ಯರ ಈ ಹೇಳಿಕೆ ಬಿಜೆಪಿಗರ ಕಣ್ಣು ಕೆಂಪಗಾಗಿಸಿತ್ತು. ಈ ನಡುವೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಸಿದ್ದರಾಮಯ್ಯರ ಈ ಹೇಳಿಕೆ ತಪ್ಪಾಗಿದೆ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕನನ್ನೇ ವಿರೋಧಿಸಿದ್ದಾರೆ.
ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಂದು ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಏರಿಯಾದಲ್ಲಿ ಯಾರ ಫೋಟೋವನ್ನು ಬೇಕಿದ್ದರೂ ಅಳವಡಿಸಬಹುದು. ಇದು ಪ್ರಜಾಪ್ರಭುತ್ವ, ಇಲ್ಲಿ ಯಾರ ಫೋಟೋ ಬೇಕಿದ್ದರೂ ಹಾಕಬಹುದು. ನಿರ್ದಿಷ್ಟವಾಗಿ ಈ ಫೋಟೊ ಇಲ್ಲಿ ಹಾಕಬೇಡಿ ಎಂದು ಹೇಳಲು ಪ್ರಜಾಪ್ರಭುತ್ವ ಬಿಡೋದಿಲ್ಲ . ಫೋಟೋಗಳನ್ನು ಹಾಕಲು ನಿರ್ಬಂಧವನ್ನು ಹೇರುವುದು ಸರಿಯಲ್ಲ. ಎಲ್ಲರಿಗೂ ಸ್ವಾತಂತ್ರ್ಯವಿದೆ, ಸಮಾನ ಅವಕಾಶ ಕೂಡ ಇದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಹನದ ಮೇಲೆ ಮೊಟ್ಟೆ ಎಸೆತ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಮಡಿಕೇರಿಯಲ್ಲಿ ನಡೆದಿರುವ ಈ ಘಟನೆ ಸಂಪೂರ್ಣ ಪೂರ್ವ ನಿಯೋಜಿತ, ಇದನ್ನು ನಾವು ಖಂಡಿಸುತ್ತೇವೆ. ಪೊಲೀಸರು ಈ ಸಂಬಂಧ ಕ್ರಮ ಕೈಗೊಳ್ಳಲೇಬೇಕು. ಮಡಿಕೇರಿಯಲ್ಲಿ ನಡೆದಿರುವ ಈ ಘಟನೆಯನ್ನು ವಿರೋಧಿಸಿ ನಾವು ಇಲ್ಲಿಯೇ ಆಗಸ್ಟ್ 26ರಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇಂತಹ ಘಟನೆಗಳು ಮರುಕಳಿಸಬಹುದೇ ಎಂಬ ಮಾಧ್ಯಮಗಳ ಪ್ರಶ್ನೆಗೂ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಇದೇನು ಹೊಸದಲ್ಲ . ಜನವರಿವರೆಗೆ ಕಾದು ನೋಡಿ, ಅಲ್ಲಿಂದ ಅವರ ರಿಯಲ್ ಸ್ಟೋರಿ ಆರಂಭವಾಗುತ್ತೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಉನ್ನತ ಹುದ್ದೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮ ಯಡಿಯೂರಪ್ಪ ಪಾಲಿಗೆ ಬೋನಸ್ ಆಗಿದೆ. ಬಹುಶಃ ಇದು ಯಶಸ್ವಿಯಾಗಿಲ್ಲ ಅಂದಿದ್ದರೆ ಬಿಜೆಪಿಯಲ್ಲಿ ಯಡಿಯೂರಪ್ಪರನ್ನೂ ದೂರ ತಳ್ಳುತ್ತಿದ್ದರು. ಇದೊಂದು ಚುನಾವಣೆಗೆ ಯಡಿಯೂರಪ್ಪರನ್ನು ಬಳಸಿಕೊಳ್ತಾರೆ. ಇದು ಯಡಿಯೂರಪ್ಪರ ಕೊನೆಯ ಚುನಾವಣೆ, ಬಿಜೆಪಿಯಲ್ಲಿ 75 ವಯಸ್ಸಿನ ಮಾನದಂಡವಿದೆ. ಯಡಿಯೂರಪ್ಪಗೆ ಈಗ 80 ವಯಸ್ಸಾಗಿದೆ. ಹೀಗಾಗಿ ಇದೊಂದು ಚುನಾವಣೆಯಲ್ಲಿ ಅವರನ್ನು ಬಳಸಿಕೊಂಡು ಬಳಿಕ ಇತಿಹಾಸದಲ್ಲಿ ಮಾತ್ರ ಯಡಿಯೂರಪ್ಪ ಇರ್ತಾರೆ ಎಂದು ಹೇಳಿದರು.
ಇದನ್ನೂ ಓದಿ : Former CM Kumaraswamy : ರಾಷ್ಟ್ರೀಯ ಪಕ್ಷಗಳಿಂದಲೇ ರಾಜ್ಯದ ಶಾಂತಿಗೆ ಧಕ್ಕೆ : ಮಾಜಿ ಸಿಎಂ ಹೆಚ್ಡಿಕೆ ಕಿಡಿ
Satish Jarakiholi gave a statement against Siddaramaiah