ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಉಪದ್ರವ ಇದ್ದೇಇದೆ. ಹಾಗಂತ ಬೇರೆ ಸರ್ಕಾರಗಳ ಆಡಳಿತವಿದ್ದಾಗಲೂ ಗೊಂದಲಗಳು ಇಲ್ಲದಿಲ್ಲ. ಆದರೆ ಬಿಎಸ್ವೈ ಅವರ ‘ರಾಜಾಹುಲಿ’ಯ ಚದುರಂಗದಾಟಕ್ಕೂ, ಇತರೆ ಪಕ್ಷಗಳ ಆಡಳಿತಕ್ಕೂ ಬಹಳಷ್ಟು ಭಿನ್ನತೆ ಇರುವುದು ಇಲ್ಲಿ ಮುಖ್ಯ. ಒಂದು ಸಂಕೀರ್ಣ ಸ್ಥಿತಿಯಲ್ಲಿ ಅಧಿಕಾರದ ಚುಕ್ಕಾಣಿ ‘ಹಿಡಿದ’ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವು, ಆನಂತರದ ಬಹಳಷ್ಟು ವರಸೆಗಳಿಗೆ ಕಾರಣವಾಗಿದ್ದು ವಿಶೇಷ. ಸರ್ಕಾರ ರಚನೆಗೆ ತಮ್ಮ ಮಹತ್ವಪೂರ್ಣ ನೆರವು ನೀಡಿದರೆಂಬ ಕಾರಣಕ್ಕೆ ‘ಹಲವು ನಾಯಕರಿಗೆ’ ಸಚಿವರ ಸ್ಥಾನ ಕೊಡುದಾಗಿ ಬಿಎಸ್‌ವೈ ಕೊಟ್ಟ ಮಾತು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.

‘ಹಿಂಗ್ ಬಂದ್ ಹಂಗ್ ಸಪೋರ್ಟ್ ಮಾಡ್ದೋರಿಗೆ ಸೀಟು ಕೊಟ್ರೆ ಮೂಲ ಕರ್ಯಕರ್ತರ ಶ್ರಮಕ್ಕೆ ಬೆಲೆ ಏನು? ಬಿಸ್ಲು, ಮಳೆ ಅನ್ದಂಗ ಅವರ್ ಯಾಕ್ ಕಮಲಕ್ಕಾಗಿ ದುಡೀಬೇಕು?’ ಇದು ಮೂಲ ಬಿಜೆಪಿಗರ ಪ್ರಶ್ನೆ. ಉತ್ತರ ಸ್ಪಷ್ಟ. ಉಪಕಾರ ಮಾಡಿದವರಿಗೆ ಅಪಕಾರ ಮಾಡದೆ, ಉಪಕಾರ ಸ್ಮರಣೆ ಮಾಡಬೇಕು ಎನ್ನುವುದು ರಾಜಾಹುಲಿಯ ವಾದ. ಇದಕ್ಕೆ ಅವರು ಬದ್ಧರಾಗಿರುವುದು, ಉಳಿದವರಿಗೆ ಅದು ಅಪಥ್ಯವಾಗಿರುವುದು ಗುಟ್ಟಿನ ವಿಷಯವಲ್ಲ.

ಅಧಿಕಾರ ಯಾರಿಗೆ ತಾನೆ ಬೇಡ..? ಎಲ್ಲರಿಗೂ ಅಧಿಕಾರದ ಆಸೆ ಇರುವುದು ಸಹಜ. ಇಲ್ಲಿ ಯೋಚಿಸಬೇಕಿರುವುದು ಎಷ್ಟು ಸೀಟುಗಳಿವೆ..? ಯಾರಿಗೆ ಕೊಡಬೇಕು? ಎನ್ನುವದೇ ಕಗ್ಗಂಟು. ಪ್ರಸ್ತುತ ಇರುವುದು ಏಳು ಸ್ಥಾನ. ಆಕಾಂಕ್ಷಿಗಳ ದಂಡೇ ಇದೆ. ಅದು ಪ್ರತಿ ದಿನ ಪ್ರತಿಕ್ಷಣ ಒಂದಿಲ್ಲೊAದು ಕಾರಣಕ್ಕೆ ಸುದ್ದಿಯಾಗುತ್ತಿರುವುದು ಅತ್ತ ಹೈ ಕಮಾಂಡ್‌ಗೂ-ಇತ್ತ ಬಿಎಸ್‌ವೈ ಅವರಿಗೂ ಟೆನ್ಷನ್ ಹೆಚ್ಚಿಸುತ್ತಿದೆ. ಸಂಘಪರಿವಾರದ ಪ್ರಭಾವಿಯೊಬ್ಬರು ಬಿಎಸ್‌ವೈ ಬಗ್ಗೆ ಋಣಾತ್ಮಕವಾಗಿ ಒಳಗೊಳಗೇ ಕಾರ್ಯ ತಂತ್ರ ಹೆಣೆಯುತ್ತಿರುವುದು, ರಾಜ್ಯಬಿಜೆಪಿ ಘಟಕವೂ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎನ್ನುವ ರೂಮರ್‌ಗೆ ಎಷ್ಟು ತಾಕತ್ತಿದೆಯೋ ಗೊತ್ತಿಲ್ಲ. ಆದರೆ ಯತ್ನಾಳ್ ಅಂಥವರು ಪಬ್ಲಿಕ್ ಆಗಿ ‘ಮಾತು’ಗಳನ್ನು ಹರಿಯ ಬಿಡುತ್ತಿರುವುದು ಅವರ ವಿರುದ್ಧ ಶಿಸ್ತು ಸಮಿತಿಯೂ ಯಾವುದೇ ಕ್ರಮ ಕೈಗೊಳ್ಳದಿರುವುದೇ ನಾಡಿನ ಜನತೆ ಮುಂದಿರುವ ಮಿಸ್ಟರಿ..! ಇದೇ ವಿಷಯ ಸಮಯ, ಸಂದರ್ಭ ಸಿಕ್ಕಾಗಲೆಲ್ಲ ಪ್ರತಿ ಪಕ್ಷಗಳೂ ಇದನ್ನೇ ದೊಡ್ಡದು ಮಾಡುತ್ತಿರುವುದು ಗಮನಾರ್ಹ.

ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗುತ್ತಿದ್ದರೂ ಹೈಕಮಾಂಡ್ ಮಾತ್ರ ಸಚಿವ ಸಂಪುಟ ವಿಸ್ತರಿಸಬೇಕೋ.. ಸಚಿವ ಸಂಪುಟವನ್ನು ಪುನಾರಚಿಸಬೇಕೋ ಎನ್ನುವುದರ ಬಗ್ಗೆ ಮಾತ್ರ ಮುಗುಮ್ಮಾಗಿದೆ. ಬಿಎಸ್‌ವೈ ದಿಲ್ಲಿಗೆ ಹೋದಾಗಲೆಲ್ಲಾ ಸಂಪುಟ ರಚನೆ-ವಿಸ್ತರಣೆಯ ಮಾತು ರೆಕ್ಕೆಪುಕ್ಕ ಪಡೆಯುತ್ತದೆ. ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ತೋಳ ಗಂತು ತೋಳ ಕತೆಯಾಗಿ ರೂಪಾಂತರವಾಗುತ್ತಿದೆ. ಏಳೆಂಟು ಸಲ ಇನ್ನೇನು ಸಂಪುಟ ವಿಸ್ತರಣೆ ಆಗಿಯೇ ಹೋಯಿತು ಎನ್ನುವುದರೊಳಗೆ ಮತ್ತದೇ ಹಳೆಯ ವಿಷಯ. ಹೈಕಮಾಂಡ್ ಇನ್ನೂ ಸೂಚನೆ ಕೊಟ್ಟಿಲ್ಲ ಎಂದೋ, ಮುಂದಿನ ತಿಂಗಳು ಎಂದೋ ಸಿಎಮ್ ಅವರು ಉಸುರುತ್ತಾರೆ. ಶಂಕರ್,ಎಂಟಿಬಿ ನಾಗರಾಜ್, ಮುನಿರತ್ನ,ಕತ್ತಿ,ವಿಶ್ವನಾಥ್ ಸೇರಿದಂತೆ ಅನೇಕರು ತಮ್ಮ ‘ಸಹಕಾರ’ ಸ್ಮರಣೆ ಮುಂದಿಟ್ಟುಕೊಂಡು ಸಿಎಂ ಅವರ ಬಳಿ ಹೋಗಿ ಬರಿಗೈಲಿ ನಿರಾಸೆಯಿಂದಲೇ ಹಿಂದಿರುಗುತ್ತಾರೆ. ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಮತ್ತೆ ತಮ್ಮ ಹಿಂದಿನ ಹೇಳಿಕೆಯನ್ನೇ ಮುಖ್ಯಮಂತ್ರಿ ಯಡಿಯೂರಪ್ಪ ಪುನರಾವರ್ತಿಸುವುದು ಸಾಮಾನ್ಯವಾಗಿದೆ.

ಆದರೆ ಇದೇ ಶನಿವಾರ ಮಾತ್ರ, ತಮ್ಮಿಂದ ದೃಢವಾದ ನಿಲುವನ್ನು ತಾಳಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಸೂಚ್ಯವಾಗಿ ಪ್ರತಿಕ್ರಿಯಿಸಿ ದ್ದಾರೆ. ಇದರ ಹಿಂದೆ ಹೈಕಮಾಂಡ್ ಆದೇಶ ಸ್ಪಷ್ಟವಾಗದೇ ಇರುವುದು ಒಂದಾದರೆ, ಒಂದು ವೇಳೆ ಮಾತು ಕೊಟ್ಟವರಿಗೇ ಸಚಿವ ಸ್ಥಾನ ಕೊಡಿಸಿದರೆ ಉಳಿದವರು ದಂಗೆದ್ದರೆ ಹೇಗೆ? ಎಂಬ ಪ್ರಶ್ನೆ ಅವರ ಮುಂದೆ ಇರಲಿಕ್ಕೂ ಸಾಕು. ಅಥವಾ ಇವರಿಗೆ ಎಲ್ಲಾ ಅಧಿಕಾರ ಕೊಟ್ಟರೆ ಮೊನಾಪಲಿ ಆದೀತು ಎಂಬ ಆಂತರಿಕ ಭಯವೂ ದಿಲ್ಲಿಯ ವರಿಷ್ಠರಿಗೆ ಕಾಡಿದ್ದಿರಬಹುದು.

ಇದನ್ನೆಲ್ಲಾ ಅವಲೋಕಿಸಿ, ಎದುರಾಗಲಿರುವ ಅಪಾಯವನ್ನು ಪರಾಮರ್ಶಿಸಿದ್ದ ಮುಖ್ಯಮಂತ್ರಿ ಅವರು,”ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ನನ್ನದೇನೂ ಇಲ್ಲಾ. ವರಿಷ್ಠರಿಂದ ಯಾವ ರೀತಿಯ ಆದೇಶ ಬರುತ್ತೋ ಹಾಗೇ ಮಾಡುತ್ತೇನೆ”ಎನ್ನುವ ಮೂಲಕ ವಿವಾದದ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ. ಇದಕ್ಕೆ ಕಟೀಲ್ ಕೂಡ ದನಿ ಗೂಡಿಸಿದ್ದಾರೆ. ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಯ ಕಸರತ್ತು ಮತ್ತೆ ವೇಗ ಪಡೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಆ ಪ್ರಕ್ರಿಯೆ ಪುನಃ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿರುವ ಪರಿಯೇ ಇಂಬು ನೀಡುತ್ತಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ, “ಸಂಪುಟ ವಿಸ್ತರಣೆ ಎನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಶೀಘ್ರ ಆ ಕೆಲಸವನ್ನು ಸಿಎಂ ಕೈಗೆತ್ತಿಕೊಳ್ಳಲಿದ್ದಾರೆ ಎಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ‘ನೀನು ಅತ್ತಂಗೆ ಮಾಡು ನಾನು ನಕ್ಕಂತೆ ಮಾಡ್ತೇನೆ’ ಎನ್ನುವ ಗಾದೆಯಂತಾಗಿದೆ ಸಂಪುಟ ವಿಸ್ತರಣೆ ವಿಷಯ. ಸಂಪುಟ ವಿಸ್ತರಣೆಯು ಸಂಕ್ರಾAತಿಗೆ ಮುನ್ನವೇ ನಡೆಯಲಿದೆ ಎಂಬ ಇನ್ನೊಂದು ಊಹೆಯೂ ತೇಲಿ ಬಂದಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಅವರಂತೂ, “ಇಂದು ಮುಖ್ಯಮಂತ್ರಿಗಳ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ.

ಇಂದು ಸಂಜೆಯೇ ನಾನು ಸಚಿವನಾಗಬಹುದು” ಎನ್ನುವ ಖಚಿತ ವಿಶ್ವಾಸದ ಮಾತನ್ನು ಬುಧವಾರ (ಜ.6) ಹೇಳಿದ್ದರು. ಸಿಎಂ ಬದಲಾಗಲಿದ್ದಾರೆ ಎನ್ನುವ ಸುದ್ದಿಯ ನಡುವೆ ಉಸ್ತುವಾರಿ ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರೇ ಮುಂದಿನ ಎರಡೂವರೆ ವರ್ಷ ಸಿಎಂ, ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಆ ಮೂಲಕ, ಹೊಸ ಚೈತನ್ಯ ತುಂಬಿಕೊಮಡು ಯಡಿಯೂರಪ್ಪ, ಶ್ರೀಘ್ರವೇ ಸಂಪುಟ ವಿಸ್ತರಣೆಗೆ ಕೈಹಾಕಬಹುದು ಎನ್ನುವ ನಿರೀಕ್ಷೆ ಸದ್ಯದ ಮಟ್ಟಿಗೆ ಹುಸಿಯಾಗುವ ಸಾಧ್ಯತೆಯಿದೆ. ಆದರೆ ಬಿಎಸ್ವೈ ಅವರ ಮೂಗುದಾರ ಇನ್ನೂ ಬಿಜೆಪಿ ವರಿಷ್ಠರ ಬಳಿ ಇದೆ ಎನ್ನುವವರೂ ಇದ್ದಾರೆ.

ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ. ಹಿಂದೆ ಮಾತು ಕೊಟ್ಟಂತೆ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್ ಮತ್ತು ಮುನಿರತ್ನ ಜೊತೆಗೆ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಯಿದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿತ್ತು. ಆದರೀಗ ಸಿಎಂ ಯಡಿಯೂರಪ್ಪನವರು ನೀಡಿದ ಹೇಳಿಕೆ ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯನ್ನು ತಂದಿದೆ. ನಾಳೆಯೋ, ನಾಡಿದ್ದೋ ಇವರ ವಿರುದ್ಧ ಅವರೂ, ಅವರ ವಿರುದ್ಧ ಇವರೂ ಏಟಿಗೆ ಎದುರೇಟು ಕೊಡಬಹುದು. ಯಾಕೆಂದರೆ ಇದು ರಾಜಕೀಯ..!
ವರ್ತಮಾನದ ಒಗಟು : ಯಾವುದೂ ಶಾಶ್ವತ ಅಲ್ಲ ಅಂತ ಗೊತ್ತಿದ್ದರೂ ಕ್ಷಣ ಮಾತ್ರದ ಕುರ್ಚಿಎಂಬ ಮರೀಚಿಕೆಯ ಹಿಂದೆ ದಂಡೇ ಇದೆ