ಬಾಬು ಅಂದ್ರೆ ಯಾರ್ಗೂ ತಿಳಿಯಲ್ಲ, ಆದ್ರೆ ಕೆಜಿಎಫ್ ಬಾಬು (KGF Babu) ಅಂದ್ರೆ ಸದ್ಯ ಗೊತ್ತಿಲ್ದಿರೋ ಮಂದಿನೆ ಇಲ್ಲ! ಇಡೀ ದೇಶದಲ್ಲೇ ಸಿನಿಮಾದಿಂದ (KGF) ಹೆಸರು ಮಾಡಿದ ಒಂದು ಊರಿನ ಹೆಸರನ್ನು ತಮ್ಮೊಟ್ಟಿಗೆ ಇಟ್ಟುಕೊಂಡು ಫೇಮಸ್ ಆದವರು ಕೆಜಿಎಫ್ ಬಾಬು. ಬರೋಬ್ಬರಿ 1,741 ಕೋಟಿ ಆಸ್ತಿ ಘೋಷಿಸಿಕೊಂಡು ಒಮ್ಮಿಂದೊಮ್ಮೆ ಯಾರಪ್ಪಾ ಈ ವ್ಯಕ್ತಿ ಅಂತ ಧಿಡೀರ್ ಎಂದು ಸುದ್ದಿಯಾದವರು. ಐಟಿ ದಾಳಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಓಡಾಟ, ಮತ್ತದೇ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ವಿಚಾರಗಳು.
ಈ ಎಲ್ಲ ವಿದ್ಯಮಾನಕ್ಕೂ ಮುನ್ನ ಇನ್ನೂ ಒಂಚೂರು ಹಿಂದೆ ಹೋದ್ರೆ ಕೆಜಿಎಫ್ ಬಾಬು ಕಥೆ ಬಾಲಿವುಡ್‌ಗೂ ಲಿಂಕ್ ಆಗುತ್ತೆ. ಸ್ವತಃ ಇದೇ ಕೆಜಿಎಫ್ ಬಾಬು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕಾರನ್ನು ಖರೀದಿಸಿದ್ರು. ಬೆಂಗಳೂರು ರೋಡಲ್ಲಿ ಆರ್‌ಟಿಒ ಅಧಿಕಾರಿಗಳು ಈ ಕಾರಿಗೆ ಕೈ ಅಡ್ಡ ಹಾಕಿದ್ರು. ಆಗಲೇ ಗೊತ್ತಾಯ್ತು ಈ ಕಾರಿಗೆ ಇರಬೇಕಾದ ಎಲ್ಲ ದಾಖಲಾತಿ ಇಲ್ಲ ಅಂತ. ಅಷ್ಟೇ ಅಲ್ಲ, ಇದು ಅಮಿತಾಬ್ ಬಚ್ಚನ್ ಕಾರು ಅಂತಾನೂ ವಿಷ್ಯ ಹೊರಗೆ ಬಿತ್ತು. ಆವಾಗ್ಲೆ ಸಖತ್ ವೈರಲ್ ಆಗೊದ್ರು ಕೆಜಿಎಫ್ ಬಾಬು.
ಕಾರೇನೊ ಅಮಿತಾಬ್ ಬಚ್ಚನ್ ಅವ್ರದ್ದು, ಆದ್ರೆ ಕರ್ನಾಟಕ ಹೀಗೊಬ್ಬ ವ್ಯಕ್ತಿ ತನ್ನ ರೋಲ್ಸ್ ರಾಯ್ಸ್ ಕಾರನ್ನು ಖರೀದಿ ಮಾಡಿದ್ದಾರೆ ಎಂಬ ವಿಷ್ಯ ಬಿಗ್ ಬಿಗೆ ಗೊತ್ತೇ ಇರ್ಲಿಲ್ಲ. ಯಾಕಂದ್ರೆ ಕೆಜಿಎಫ್ ಬಾಬು ಮಧ್ಯವರ್ತಿಯೋರ್ವರ ಮೂಲಕ ಈ ಕಾರ್ ಖರೀದಿ ಮಾಡಿದ್ರು. ಕೊನೆಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕಾರ್ ವಿಷ್ಯ ದಂಡ ಕಟ್ಟಿ ಕಾರ್ ಬಿಡಿಸಿಕೊಂಡು ಸಮಾಪ್ತಿಯಾಗಿತ್ತು. ಆವಾಗ್ಲೇ ಯೂಸಫ್ ಶರೀಫ್ ಎಂಬ ವ್ಯಕ್ತಿ ಈ ಮಟ್ಟಿಗೆ ಕೆಜಿಎಫ್ ಬಾಬು ಬೆಳೆದಿದ್ದು ಇಡೀ ಜಗತ್ತಿಗೆ ಗೊತ್ತಾಗಿದ್ದು.
ಕೆಜಿಎಫ್ ಬಾಬು ಅವರ ತಂದೆಗೆ ಒಟ್ಟು ೧೪ ಮಕ್ಕಳು. ಬಾಬುವೇ ಹಿರಿಯ ಮಗ. ದುಡಿಯೊ ಅನಿವಾರ್ಯತೆಯಿಂದ ಭಾರತ್ ಗೋಲ್ಡ್ ಮೈನ್ಸ್‌ನ ಸ್ಕ್ರ್ಯಾಪ್ ಮೆಟೀರಿಯಲ್‌ನಲ್ಲಿ ಕೆಲಸ ಶುರು ಮಾಡಿದ ಅವರು ಮುಂದೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಧುಮುಕಿಯೇ ಬಿಟ್ಟರು. ಉಮ್ರಾ ಡೆವಲಪರ್ಸ್ ಎಂಬ ಹೆಸರಿನ ಸಂಸ್ಥೆ ಅವರ ಕೈಹಿಡಿಯಿತು. ಜೇಬು ತುಂಬಿಸಿತು.
ರಿಯಲ್ ಎಸ್ಟೇಟ್‌ನಿಂದ ರಾಜಕೀಯಕ್ಕೆ
ಕೆಜಿಎಫ್ ಬಾಬು ಕಳೆದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ರು. ಆಗಿನ ಅವರ ಆಸ್ತಿ ಘೋಷಣೆ ಪ್ರಕಾರ ಅವರ ಬಳಿ 23 ಬ್ಯಾಂಕ್ ಅಕೌಂಟ್‌ಗಳಿದ್ವು. 2 ಕೋಟಿ 99 ಲಕ್ಷ ರೂ. ಬೆಲೆ ಬಾಳುವ ಮೂರು ಕಾರುಗಳಿದ್ವು. 1593 ಕೋಟಿ ರೂ. ಬೆಲೆ ಬಾಳುವ ಒಟ್ಟು 26 ಸೈಟ್‌ಗಳನ್ನು ಹೊಂದಿದ್ರು ಯೂಸುಫ್ ಶರೀಫ್. 48 ಕೋಟಿ ಬೆಲೆಯ ೩ ಕೃಷಿ ಭೂಮಿ, ೩ ಕೋಟಿ ಬೆಲೆ ಬಾಳುವ ಮನೆ ಇರೋದಾಗಿ ಅವರು ಅಧಿಕೃತವಾಗಿ ಘೋಷನೆ ಮಾಡಿಕೊಂಡಿದ್ರು. ಜೊತೆಗೆ 58 ಕೋಟಿ ಸಾಲ ಇರೋದಾಗೂ ಘೋಷಿಸಿಕೊಂಡಿದ್ರು.
ಇಬ್ಬರು ಹೆಂಡಿರು!
ಅಂದಹಾಗೆ ಯೂಸುಫ್ ಷರೀಫ್ ಅವರಿಗೆ ಇಬ್ಬರು ಹೆಂಡತಿಯರು. ತಾಜ್ ಅಬ್ದುಲ್ ರಜಾಕ್, ಶಾಜಿಯಾ ತರನ್ನಮ್ ಎಂಬ ಇಬ್ಬರು ಮಡದಿಯರಿಂದ ಐದು ಮಕ್ಕಳನ್ನು ಹೊಂದಿದ್ದಾರೆ ಕೆಜಿಎಫ್ ಬಾಬು.
ಅಮಾನತ್ತಿನ ಶಿಕ್ಷೆ
ಕೆಜಿಎಫ್ ಬಾಬು ಸದ್ಯ ಅಮಾನಾತ್ ಆದ ಕಾಂಗ್ರೆಸ್ ನಾಯಕ! ಹೌದು, ಚಿಕ್ಕಪೇಟೆ ವಿಧಾನಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯೂಸುಫ್ ಶರೀಫ್ ಈಗ ಕಾಂಗ್ರೆಸ್ ಮಾಜಿ ನಾಯಕ. ಯಾಕಂದ್ರೆ ಕಾಂಗ್ರೆಸ್ ಪಕ್ಷ ಹೀಗೆ ಮಾಡ್ತಿದ್ರೆ ೮೦ ಸೀಟನ್ನೂ ಗೆಲ್ಲಲ್ಲ ಎಂಬ ಹೇಳಿಕೆಯೆ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಿತು. ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಿದ್ದಕ್ಕೆ ಅವರನ್ನು ಜನವರಿ ೬, ೨೦೨೩ರಂದು ಕೆಪಿಸಿಸಿ ಅಮಾನತು ಮಾಡಿದೆ. ಬಹುತೇಕ ಕರ್ನಾಟಕ ಅತಿ ಶ್ರೀಮಂತ ರಾಜಕಾರಣಿ ಎಂದೇ ಹೇಳಲಾಗಿದ್ದ ಕೆಜಿಎಫ್ ಬಾಬು ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಒಂದಕ್ಕೇ ಸೀಮಿತರಾಗ್ತಾರಾ? ಅಥವಾ ರಾಜಕೀಯ ಹಾವು ಏಣಿ ಆಟದಲ್ಲಿ ಗೆದ್ದು ಬರ್ತಾರಾ? ಕಾದುನೋಡಬೇಕು ಅಷ್ಟೇ.
ಇದನ್ನೂ ಓದಿ : H D Kumaraswamy :ಕುಮಾರಸ್ವಾಮಿ ಪ್ರಲ್ಹಾದ್ ಜೋಶಿಯನ್ನುದ್ದೇಶಿಸಿ ಹೇಳಿದ ದೇಶಸ್ಥ ಬ್ರಾಹ್ಮಣರು ಅಂದ್ರೆ ಯಾರು?
ಇದನ್ನೂ ಓದಿ : Next CM of Karnataka : ಬೊಮ್ಮಾಯಿ ಬಳಿಕ ಬಿ.ಎಲ್.ಸಂತೋಷ್ ಸಿಎಂ: ನಿಜವಾಗುತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಮಾತು
(Who is KGF Babu? Know his journey from real estate to politics)