ಜೆಡಿಎಸ್ ತೊರೆಯುವ ಶಾಸಕರೆಲ್ಲರಿಗೂ ಕುಮಾರಸ್ವಾಮಿ ಮೇಲೆಯೇ ಸಿಟ್ಯಾಕೆ ?

ಬೆಂಗಳೂರು : (JDS Angry) ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ (JDS) ಒಡೆದ ಮನೆ ಎಂಬುದು ಎಲ್ಲರಿಗೂ ಗೊತ್ತು. ಜೆಡಿಎಸ್”ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ರಾಜ್ಯಸಭಾ ಚುನಾವಣೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ (Srinivasa Gowda) ಕಾಂಗ್ರೆಸ್’ಗೆ ಮತ ಹಾಕಿದ್ದರು. ಜೆಡಿಎಸ್”ಗೆ ಮತ ಹಾಕಿದ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (S.R Srinivas) ಬಗ್ಗೆ ಕುಮಾರಸ್ವಾಮಿಯವರಿಗೆ ಅಪನಂಬಿಕೆ. ಅವರು ಜೆಡಿಎಸ್”ಗೆ ಮತ ಹಾಕಿಲ್ಲ, ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಕುಮಾರಸ್ವಾಮಿ (H.D Kumaraswamy) ನೇರ ಆರೋಪ ಮಾಡಿದ್ದರು.

ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಶ್ರೀನಿವಾಸ ಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ರಾಜ್ಯಸಭಾ ಚುನಾವಣೆಯ ನಂತರ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಎಸ್.ಆರ್ ಶ್ರೀನಿವಾಸ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಏಕವಚನದಲ್ಲಿ ಬೈದಿದ್ದರು. “ಕುಮಾರಸ್ವಾಮಿಗೆ ತಾಕತ್ತಿದ್ರೆ, ಮುಂದಿನ ಚುನಾವಣೆಯಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ನೋಡೋಣ” ಎಂದು ಸವಾಲು ಹಾಕಿದ್ದರು. ಹೀಗೆ ಜೆಡಿಎಸ್ ತೊರೆಯುವ ಶಾಸಕರೆಲ್ಲರಿಗೂ ಕುಮಾರಸ್ವಾಮಿ ವಿರುದ್ಧವೇ ಕೋಪ. ಅಪ್ಪಿ ತಪ್ಪಿ ಯಾರೊಬ್ಬರೂ ದೇವೇಗೌಡರ (H,.D Devegowda) ವಿರುದ್ಧ ಮಾತನಾಡುವುದಿಲ್ಲ. ಕುಮಾರಸ್ವಾಮಿ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಾ ಜೆಡಿಎಸ್ ತೊರೆಯುತ್ತಿದ್ದಾರೆ.

2016ರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಿ ಜೆಡಿಎಸ್’ನಿಂದ ಉಚ್ಛಾಟನೆಗೊಂಡಿದ್ದ ಜಮೀರ್ ಅಹ್ಮದ್ ಖಾನ್ & ಟೀಮ್ ಕೂಡ ಅವತ್ತು ಆಕ್ರೋಶ ಹೊರ ಹಾಕಿದ್ದು ಕುಮಾರಸ್ವಾಮಿ ವಿರುದ್ಧವೇ. ನಾಗಮಂಗಲದ ಶಾಸಕರಾಗಿದ್ದ ಎನ್.ಚಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಶ್ರೀರಂಗಪಟ್ಟಣದ ಶಾಸಕರಾಗಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮಾಗಡಿ ಶಾಸಕರಾಗಿದ್ದ ಎಚ್.ಸಿ ಬಾಲಕೃಷ್ಣ ಮತ್ತು ಗಂಗಾವತಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ.. ಹೀಗೆ ಜೆಡಿಎಸ್ ವಿರುದ್ಧ ಸಿಡಿದೆದ್ದಿದ್ದ ಶಾಸಕರೆಲ್ಲರಿಗೂ ಕೋಪ ಇದ್ದದ್ದು ಕುಮಾರಸ್ವಾಮಿ ಮೇಲೆ ಹೊರತು ದೇವೇಗೌಡರ ಮೇಲಲ್ಲ.

ಈಗಲೂ ಅಷ್ಟೇ.. ಜೆಡಿಎಸ್ ತೊರೆಯಲು ಸಿದ್ಧವಾಗಿರುವ ಶಾಸಕರಾದ ಶ್ರೀನಿವಾಸಗೌಡ ಮತ್ತು ಎಸ್.ಆರ್ ಶ್ರೀನಿವಾಸ್, ಕುಮಾರಸ್ವಾಮಿ ವಿರುದ್ಧವೇ ಗುಡುಗುತ್ತಿದ್ದಾರೆ. ಇನ್ನು ಜೆಡಿಎಸ್ ’ನಿಂದ ಒಂದು ಕಾಲು ಹೊರಗಿಟ್ಟಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಮತ್ತು ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಅಸಮಾಧಾನಕ್ಕೂ ಕುಮಾರಸ್ವಾಮಿ ಯವರೇ ಕಾರಣ. ಕುಮಾರಸ್ವಾಮಿಯವರ ಚುಚ್ಚುಮಾತುಗಳು, ಶಾಸಕರ ಬಗ್ಗೆ ತೋರುವ ಅಸಡ್ಡೆ, ಅವಮಾನವಾಗುವಂತೆ ಮಾತನಾಡುವ ಶೈಲಿ, ಕ್ಷೇತ್ರದಲ್ಲಿ ತಮ್ಮ ವಿರುದ್ಧ ಮತ್ತೊಬ್ಬ ಪರ್ಯಾಯ ಅಭ್ಯರ್ಥಿಯನ್ನು ಬೆಳೆಸುವ ಪ್ರಯತ್ನ. ಇವೆಲ್ಲಾ ಜೆಡಿಎಸ್ ಶಾಸಕರು ಕುಮಾರಸ್ವಾಮಿ ವಿರುದ್ಧ ಸಿಡಿದು ನಿಲ್ಲಲು ಕಾರಣ ಎಂದು ಜೆಡಿಎಸ್ ಮೂಲಗಳೇ ಹೇಳ್ತಿವೆ. ಪ್ರಭಾವಿ ಶಾಸಕರೆಲ್ಲಾ ಹೀಗೆ ಜೆಡಿಎಸ್ ವಿರುದ್ಧ ತಿರುಗಿ ಬೀಳುತ್ತಾ ಹೋದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಗೆ ಭಾರೀ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ : d k shivakumar : ಇಡಿ ವಿಚಾರಣೆ ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತವೇ, ಬಿಜೆಪಿಗಿಲ್ಲವೇ : ಡಿಕೆಶಿ ಪ್ರಶ್ನೆ

ಇದನ್ನೂ ಓದಿ : bjp vs Nalapad : ಯುವ ನಾಯಕ ನಲಪಾಡ್ ಮಾಡೋದೆಲ್ಲ ಎಡವಟ್ಟು: ಗೂಂಡಾ ಶಿಷ್ಯರು ಎಂದು ಬಿಜೆಪಿ ಟ್ವೀಟ್

why legislators who have left the JDS Angry Against Kumaraswamy

Comments are closed.